ನವೆಂಬರ್ ಕ್ರಾಂತಿ ನಾಟಕ ಬಿಟ್ಟು ರಸ್ತೆ ಗುಂಡಿ ಮುಚ್ಚಿ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ‘ಸಚಿವ ಸಂಪುಟ ಪುನರ್ ರಚನೆ, ಅಧಿಕಾರ ಹಸ್ತಾಂತರ, ನವೆಂಬರ್ ಕ್ರಾಂತಿ’ ನಾಟಕಗಳನ್ನು ಬಿಟ್ಟು, ರಸ್ತೆ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತವಿದ್ದರೂ, ಬೀದಿನಾಟಕ ಮಾಡುತ್ತಿರುವುದೇಕೆ?. ಬಹುಮತ ಇದ್ದಾಗ ರಾಜ್ಯದ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರಕ್ಕೆ ಉತ್ತಮ ಅವಕಾಶ. ಆದರೆ, ಕೆಲಸ ಮಾಡದೆ ಮನಸೋ ಇಚ್ಛೆ ಚರ್ಚೆಯಲ್ಲಿ ತೊಡಗಿದ್ದಾರೆ’ ಎಂದು ದೂರಿದರು.
ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಏನಾದರೂ ಮಾಡಿಕೊಳ್ಳಿ. ಅದನ್ನು ನಾವು ಅದನ್ನು ಕೇಳುತ್ತಿಲ್ಲ, ಸಂಪುಟ ಪುನರ್ ರಚನೆ ಹಬ್ಬದಂತೆ ಮಾಡದಿರಿ. ಅದು ಜನರಿಗೆ ಬೇಕಾಗಿಲ್ಲ. ನಮಗೆ ಬೇಕಾಗಿರುವುದು ಜನರ ಸಮಸ್ಯೆಗೆ ಪರಿಹಾರ. ಗುಂಡಿ ಮುಚ್ಚಲಾಗದೇ ಇವರು ಈ ಹಿಂದೆ ಆಡಳಿತದಲ್ಲಿ ಬಿಜೆಪಿ ಸರಕಾರವನ್ನು ದೂರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಬಿಜೆಪಿ ಮೊದಲಿನಿಂದಲೂ ರೈತಪರ ನಿಲುವನ್ನು ತೆಗೆದುಕೊಂಡಿದೆ. ಕಾಂಗ್ರೆಸ್ಸಿನ ರೈತ ವಿರೋಧಿ ನೀತಿಯನ್ನು ಖಂಡಿಸುವುದಲ್ಲದೇ ವಿರೋಧಿಸುತ್ತೇವೆ. ಅತಿವೃಷ್ಟಿ ಆದಾಗ ಎಲ್ಲರಿಗಿಂತ ಮೊದಲು ನಾವೇ ಹೋಗಿದ್ದೇವೆ. ವಿಜಯೇಂದ್ರ, ನಾನು ಮತ್ತು ಆರ್.ಅಶೋಕ್ ಅವರು ತೆರಳಿದ್ದೇವೆ. ನಾವು ಹೋಗುವ ವರೆಗೆ ಸರಕಾರ ಎಚ್ಚತ್ತುಕೊಂಡಿರಲಿಲ್ಲ ಎಂದು ಅವರು ಟೀಕಿಸಿದರು.