ನಾಳೆ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲಕರೊಂದಿಗೆ ಸಭೆ : ಸಿಎಂ ಸಿದ್ದರಾಮಯ್ಯ
‘ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತು ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ’
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್‍ಗೆ ಕಬ್ಬಿಗೆ 3500 ರೂ.ದರ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಕುರಿತು ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಈ ಸಂಬಂಧ ವಿಧಾನಸೌಧದಲ್ಲಿ ನಾಳೆ(ಶುಕ್ರವಾರ) ಬೆಳಗ್ಗೆ 11 ಗಂಟೆಗೆ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲಕರು ಹಾಗೂ ಮಧ್ಯಾಹ್ನ 1 ಗಂಟೆಗೆ ರೈತ ಮುಖಂಡರೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲಕರು ಹಾಗೂ ರೈತ ಮುಖಂಡರು, ಪ್ರತಿನಿಧಿಗಳ ಅಹವಾಲುಗಳನ್ನು ಆಲಿಸಿ ರಾಜ್ಯ ಸರಕಾರವು ತನ್ನ ಮಿತಿಯಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಕೈಗೊಳ್ಳಬೇಕಾದ ಸೂಕ್ತ ಕ್ರಮ ಕುರಿತು ಚರ್ಚಿಸಲು ಶೀಘ್ರವೆ ಭೇಟಿಗೆ ಸಮಾಯಾವಕಾಶ ಕೋರಿ ಪ್ರಧಾನಮಂತ್ರಿಗೆ ಪತ್ರ ಬರೆಯಲು ನಿರ್ಧರಿಸಿದ್ದೇನೆ. ಎಫ್.ಆರ್.ಪಿ ದರ ಪರಿಷ್ಕರಣೆ, ಕೇಂದ್ರ ಸರಕಾರದ ಸಕ್ಕರೆ ರಫ್ತು ನೀತಿಯಿಂದ ಆಗಿರುವ ಅನಾಹುತಗಳು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಅವರ ಗಮನಕ್ಕೆ ತಂದು ಪರಿಹರಿಸಲು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಬೆಳಗಾವಿ, ಬಾಗಲಕೋಟೆ, ಬಿಜಾಪುರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಆಯುಕ್ತರಿಗೆ ಸೂಚನೆಗಳನ್ನು ನೀಡಿ ರೈತರು ಹಾಗೂ ಕಾರ್ಖಾನೆಗಳ ಮಾಲಕರ ಜೊತೆ ಚರ್ಚೆ ನಡೆಸುವಂತೆ ಸೂಚಿಸಲಾಗಿತ್ತು. ಅದರಂತೆ ಬೆಳಗಾವಿಯಲ್ಲಿ ಎಚ್.ಕೆ.ಪಾಟೀಲ್, ಬಿಜಾಪುರದಲ್ಲಿ ಎಂ.ಬಿ.ಪಾಟೀಲ್ ರೈತ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಬೆಳಗಾವಿ ಜಿಲ್ಲಾಧಿಕಾರಿ ಚರ್ಚೆ ನಡೆಸಿ ಶೇ.11.25 ಇಳುವರಿ ಬಂದರೆ ಪ್ರತಿ ಟನ್‍ಗೆ 3,200 ರೂ. ಹಾಗೂ ಶೇ.10.25 ಇಳುವರಿ ಬಂದರೆ 3100 ರೂ.ಗಳನ್ನು (ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ) ಪಾವತಿಸುವಂತೆ ಕಾರ್ಖಾನೆಗಳ ಮಾಲಕರ ಮನವೊಲಿಸಿದ್ದಾರೆ. ಹಾಗೆಯೇ, ರೈತರಿಗೂ ಮನವೊಲಿಸುವ ಕೆಲಸ ಮಾಡಿದ್ದಾರೆ. ಆದರೆ, ವಿರೋಧ ಪಕ್ಷದವರು ಈ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವುದರಿಂದ ವಿಷಯ ತುಸು ಗೊಂದಲಕರವಾಗಿದೆ ಎಂದು ಅವರು ದೂರಿದರು.
ಕಬ್ಬು ಮತ್ತು ಸಕ್ಕರೆ ವಿಚಾರದಲ್ಲಿ ರಾಜ್ಯ ಸರಕಾರದ ಪಾತ್ರ ಅತ್ಯಂತ ನಗಣ್ಯವಾಗಿದೆ. ಕೇಂದ್ರ ಸರಕಾರವು ಪ್ರತಿ ವರ್ಷ ಎಫ್.ಆರ್.ಪಿ ದರ(ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ನಿಗದಿಪಡಿಸುತ್ತದೆ. ಅದರಂತೆ, ಪ್ರಸಕ್ತ ಸಾಲಿನ ಮೇ 6 ರಂದು ಕೇಂದ್ರ ಸರಕಾರ ಹೊರಡಿಸಿರುವ ಆದೇಶದ ಪ್ರಕಾರ ಶೇ.10.25ರಷ್ಟು ಇಳುವರಿಗೆ ಪ್ರತಿ ಟನ್ನಿಗೆ 3550 ರೂ., ಶೇ.10.25ಕ್ಕಿಂತ ಹೆಚ್ಚಿದ್ದರೆ ಪ್ರತಿ ಕ್ವಿಂಟಾಲ್‍ಗೆ ಶೇ.0.1ರಷ್ಟು ಹೆಚ್ಚುವರಿ ಬಂದರೆ 3.46 ರೂ., ಶೇ.10.25ಕ್ಕಿಂತ ಕಡಿಮೆ(ಶೇ.9.5ರವರೆಗೆ) ಇಳುವರಿ ಬಂದರೆ ಪ್ರತಿ ಕ್ವಿಂಟಾಲ್‍ಗೆ 3.46 ರೂ. ಕಡಿಮೆ ಮಾಡುತ್ತಾ ಹೋಗಬೇಕೆಂದು ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಗಮನ ಸೆಳೆದರು.
ಕೇಂದ್ರ ಸರಕಾರ ನಿಗದಿ ಮಾಡಿರುವ ದರ ರೈತರಿಗೆ ಲಭಿಸುತ್ತಿದೆಯೇ ಎಂದು ನೋಡಿಕೊಳ್ಳುವುದು ಹಾಗೂ ರೈತರಿಗೆ ತೂಕ, ಬೆಲೆ, ಹಾಗೂ ನಿಗದಿತ ಅವಧಿಯಲ್ಲಿ ಪಾವತಿ ಇತ್ಯಾದಿಗಳನ್ನು ನೋಡಿಕೊಳ್ಳುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಎಫ್.ಆರ್.ಪಿ ನಿಗದಿಪಡಿಸುವುದಷ್ಟೇ ಕೇಂದ್ರ ಸರಕಾರದ ಜವಾಬ್ದಾರಿಯಲ್ಲ. ಸಕ್ಕರೆ ಮೇಲಿನ ನಿಯಂತ್ರಣವನ್ನು ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ ಕೇಂದ್ರ ಸರಕಾರ ಹೊಂದಿದೆ ಎಂದು ಅವರು ತಿಳಿಸಿದರು.
2017-18ರವರೆಗೆ ಇಳುವರಿ ಪ್ರತಿ ಕ್ವಿಂಟಾಲಿಗೆ ಶೇ.9.5ರಷ್ಟನ್ನು ನಿಗದಿಪಡಿಸಲಾಗುತ್ತಿತ್ತು. 2018-19 ನಿಂದ 2021-22 ರವರೆಗೆ ಅದನ್ನು ಶೇ.10ಕ್ಕೆ ಹೆಚ್ಚಿಸಲಾಯಿತು. 2022-23 ರಿಂದ ಈಚೆಗೆ ಎಫ್.ಆರ್.ಪಿ.ಯನ್ನು ಶೇ.10.25ಕ್ಕೆ ಏರಿಕೆ ಮಾಡಲಾಗಿದೆ. ಈ ವಿಚಾರದಲ್ಲೂ ನಮ್ಮ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಕ್ಕರೆಗೆ 2019ರಲ್ಲಿ ಎಂ.ಎಸ್.ಪಿ(ಕನಿಷ್ಠ ಬೆಂಬಲ ಬೆಲೆ)ಯನ್ನು ಕಡೆಯದಾಗಿ ನಿಗದಿಪಡಿಸಲಾಯಿತು. ಆಗ, ಪ್ರತಿ ಕೆ.ಜಿ.ಗೆ 31 ರೂ.ನಿಗದಿ ಮಾಡಲಾಗಿತ್ತು. ಆನಂತರ ಎಂ.ಎಸ್.ಪಿಯನ್ನು ಪರಿಷ್ಕರಿಸಲಿಲ್ಲ. ಜೊತೆಗೆ, ಕಳೆದ ಕೆಲವು ವರ್ಷಗಳಿಂದಲೂ ಕೇಂದ್ರ ಸರಕಾರ ಸಕ್ಕರೆ ರಫ್ತನ್ನು ನಿಲ್ಲಿಸಿದೆ. ಕಳೆದ ವರ್ಷ ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಕರ್ನಾಟಕವೊಂದರಲ್ಲೆ 41 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಈ ಕಾರಣದಿಂದಲೂ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಎಥನಾಲ್ ವಿಚಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ. ಕರ್ನಾಟಕದಲ್ಲಿ 270 ಕೋಟಿ ಲೀಟರ್ ಉತ್ಪಾದನಾ ಸಾಮಥ್ರ್ಯ ಇದ್ದರೂ 2024-25 ರಲ್ಲಿ 47 ಕೋಟಿ ಲೀಟರ್‍ಗಳನ್ನು ತೈಲ ಕಂಪನಿಗಳಿಗೆ ಖರೀದಿ ಮಾಡಲು ಹಂಚಿಕೆ ಮಾಡಲಾಗಿದೆ. ಅದೇ ಗುಜರಾತ್ ರಾಜ್ಯದಲ್ಲಿ ಶೇ.77.50ರಷ್ಟು ಹಂಚಿಕೆ ಮಾಡಿದ್ದರೆ, ನಮ್ಮ ರಾಜ್ಯಕ್ಕೆ ಶೇ.17.40ರಷ್ಟು ಹಂಚಿಕೆ ಮಾಡಿದ್ದಾರೆ. ಇದು ಕೇಂದ್ರ ಸರಕಾರವು ರಾಜ್ಯದ ರೈತರ ಬದುಕಿನೊಂದಿಗೆ ಆಡುತ್ತಿರುವ ಚೆಲ್ಲಾಟಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಮ್ಮ ಸರಕಾರವು ಅಧಿಕಾರಕ್ಕೆ ಬಂದ ಮೇಲೆ ತೂಕದಲ್ಲಿ ನಡೆಯುತ್ತಿದ್ದ ಮೋಸವನ್ನು ತಡೆಗಟ್ಟಲು ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲೂ ಡಿಜಿಟಲ್ ತೂಕ ಯಂತ್ರವನ್ನು ಅಳವಡಿಸಲಾಗಿದೆ. ಸರಕಾರದ ವತಿಯಿಂದಲೆ 11 ಜಾಗಗಳಲ್ಲಿ ಡಿಜಿಟಲ್ ತೂಕ ಯಂತ್ರಗಳನ್ನು ಅಳವಡಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಇದರ ಜೊತೆಗೆ ತೂಕ, ಇಳುವರಿ, ಕಟಾವು ಮತ್ತು ಬಿಲ್ ಪಾವತಿಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಸಮಿತಿಗಳನ್ನು ರಚಿಸಲಾಗಿದೆ. ಎಪಿಎಂಸಿಗಳಲ್ಲಿ ಸ್ಥಾಪಿಸಿರುವ ತೂಕದ ಯಂತ್ರಗಳಲ್ಲಿ ಉಚಿತವಾಗಿ ತೂಕ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ಅವರು ಹೇಳಿದರು.
2024-25ನೆ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು 522 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದಿವೆ. ರೈತರಿಗೆ ಈ ಅವಧಿಯಲ್ಲಿ 18,221.88 ಕೋಟಿ ರೂ. ಗಳನ್ನು ಎಫ್.ಆರ್. ಪಿ. ದರದಂತೆ ಪಾವತಿಸಬೇಕಾಗಿತ್ತು. ಆದರೂ ಕೆಲವು ಕಡೆ ಸಕ್ಕರೆ ಇಳುವರಿ ಹೆಚ್ಚು ಬಂದ ಕಾರಣ 19,569.15 ಕೊಟಿ ರೂ.ಗಳನ್ನು ರೈತರಿಗೆ ಪಾವತಿಸುವಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರಕಾರ ಕೈಗೊಂಡಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕೆಲವು ರೈತ ಮುಖಂಡರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಕುರಿತು ಪ್ರಸ್ತಾಪಿಸಿದ್ದಾರೆ. ಅಲ್ಲಿ ಸುಮಾರು 40ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು 2515 ರೂ. ರಿಂದ 3635 ರೂ. ಗಳವರೆಗೆ ಕಬ್ಬಿಗೆ ಬೆಲೆಗಳನ್ನು ನೀಡುತ್ತಿವೆ. ನಾಳೆಯ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ರೈತರು ರೈತರು ಯಾವುದೆ ಕಾರಣಕ್ಕೂ ರೈತ ದ್ರೋಹಿಯಾದ ರಾಜ್ಯ ಬಿಜೆಪಿ ನಾಯಕರ ಮರಳು ಮಾತುಗಳಿಗೆ ಬಲಿಯಾಗಬಾರದು. ಎಫ್.ಆರ್.ಪಿ ನಿಗದಿ ಮಾಡುವ ಸಂಬಂಧಪಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯಾಕೆ ರೈತರ ಪ್ರತಿಭಟನಾ ಸಭೆಗೆ ಹೋಗಿಲ್ಲ ಎಂದು ಮುಖ್ಯಮಂತ್ರಿ ಕಿಡಿಗಾರಿದರು.
ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಉಪಸ್ಥಿತರಿದ್ದರು.
ಕಬ್ಬು ಬೆಳೆಗಾರರು ಹೆದ್ದಾರಿ ಬಂದ್ ಮಾಡುವ ಪ್ರತಿಭಟನೆಗೆ ಮುಂದಾಗಬಾರದು. ನಮ್ಮ ಸರಕಾರವು ಸಂವಾದದಲ್ಲಿ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ ಮತ್ತು ನಿರಂತರವಾಗಿ ರೈತ ಪರವಾದ ತೀರ್ಮಾನಗಳನ್ನು ಕೈಗೊಳ್ಳುತ್ತಾ ಬಂದಿದೆ. ಆದುದರಿಂದ, ನಾಳೆ ನಡೆಯಲಿರುವ ಸಭೆಗೆ ಬಂದು ಚರ್ಚೆ ನಡೆಸಿ, ಪ್ರತಿಭಟನೆ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.