ವಲಸಿಗರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಅಕ್ಷಮ್ಯ : ಆರ್.ಅಶೋಕ್
ಆರ್.ಅಶೋಕ್
ಬೆಂಗಳೂರು : ಬೆಂಗಳೂರು ನಗರವು ಸೇರಿದಂತೆ ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ವಸತಿ ರಹಿತರು ಇದ್ದು, ಅವರಿಗೆ ವಸತಿ ಸೌಲಭ್ಯ ಕಲ್ಪಿಸುವುದನ್ನು ಬಿಟ್ಟು ಕಾಂಗ್ರೆಸ್ ಸರಕಾರ ಅಕ್ರಮ ವಲಸಿಗರಿಗೆ ವಸತಿ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಅಕ್ಷಮ್ಯ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿನ ಕಲ್ಲು ಕ್ವಾರಿ ಇತ್ತು. 2023ರ ವರೆಗೆ ಆ ಪ್ರದೇಶದಲ್ಲಿ ಯಾವುದೇ ರೀತಿಯ ಜನವಸತಿ ಇರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಜಾಗದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಥಳೀಯ ರಾಜಕೀಯ ಮುಖಂಡನೊಬ್ಬ ಪ್ರತಿ ಕುಟುಂಬದಿಂದ 4 ಲಕ್ಷದಿಂದ 5 ಲಕ್ಷ ರೂ.ಗಳಷ್ಟು ಹಣ ಪಡೆದುಕೊಂಡು, ಶೆಡ್‍ಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾನೆ. ಈ ಎಲ್ಲ ಮಾಹಿತಿ ಸರಕಾರಕ್ಕೆ ಇದೆ. ಯಾರೊ ಮಾಡಿದ ಅಕ್ರಮಕ್ಕೆ ಇದೀಗ ಸರಕಾರವೇ ರಾಜ್ಯದ ಜನತೆ ತೆರಿಗೆ ಹಣವನ್ನು ವೆಚ್ಚ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಅಶೋಕ್ ಟೀಕಿಸಿದರು.
ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ಕೋಗಿಲು ಬಡಾವಣೆಯ ಪ್ರದೇಶದಲ್ಲಿರುವ ಎಲ್ಲರ ಬಳಿಯೂ ಆಧಾರ್ ಕಾರ್ಡ್, ರೇಷನ್ ಕಾರ್ಡ್‍ಗಳಿವೆ. ಅವುಗಳನ್ನು ಅವರು ಹೇಗೆ ಪಡೆದುಕೊಂಡರು ಎಂದು ಪ್ರಶ್ನಿಸಿದ ಅಶೋಕ್, ದೇಶದ ಯಾವ ಭಾಗದಿಂದ ಅವರು ಇಲ್ಲಿಗೆ ಬಂದರು ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಸರಕಾರ ಈವರೆಗೂ ಹೋಗಿಲ್ಲ. ಹೀಗಾಗಿಯೇ ರಾಜ್ಯದಲ್ಲಿ ಅಕ್ರಮ ವಲಸಿಗರ ಸಮಸ್ಯೆ ಆರಂಭವಾಗಿದೆ ಎಂದು ಟೀಕಿಸಿದರು.