ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು: ಸಿ.ಟಿ. ರವಿ
ಸಿ.ಟಿ. ರವಿ
ಬೆಂಗಳೂರು: ಭ್ರಷ್ಟಾಚಾರವನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಇಲ್ಲ, ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಭ್ರಷ್ಟಾಚಾರ ಇಲ್ಲ. ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ. ಹಾಗೆ ಕಾಂಗ್ರೆಸ್ ಭ್ರಷ್ಟಾಚಾರ ನೋಡುವುದಕ್ಕೆ ನಾವು ಸ್ಕ್ಯಾನ್ ಮಾಡುವ ಅವಶ್ಯಕತೆ ಇಲ್ಲ, ಎಲ್ಲವೂ ಕಣ್ಣಿಗೆ ಕಾಣುತ್ತದೆ. ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆ ಸತ್ಯ ಎಂದು ಹೇಳಿದರು.
ಯೋಜನೆ ಮಂಜೂರಾತಿ ಒಂದು ಅಡಿಗೆ 100 ರೂ. ಕೊಡಬೇಕು. ಭೂ ಬದಲಾವಣೆ ಮಾಡಬೇಕಾದರೆ 25 ಲಕ್ಷ ರೂ.ಒಂದು ಎಕರೆಗೆ ಕೊಡಬೇಕು. ಕಾಂಗ್ರೆಸ್ ಸರಕಾರ ಎಲ್ಲದರಲ್ಲೂ ಲಂಚ ಪಡೆಯುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಲಂಚ ಕೊಟ್ಟರೆ ಮಾತ್ರ ಮೊದಲು ಅನುದಾನ ಸಿಗುತ್ತದೆ. ಯಾವ ಇಲಾಖೆಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ, ರಕ್ತ ಹೀರುತ್ತಿದ್ದಾರೆ ಎಂದು ಟೀಕಿಸಿದರು.
ಆಡಳಿತ ಪಕ್ಷದ ಶಾಸಕರೇ ಈ ಪರಿ ಪರಿತಾಪ ಪಡುತ್ತಿದ್ದಾರೆ. ಇನ್ನು ವಿಪಕ್ಷ ಶಾಸಕರ ಗೋಳು ಇದೆ. ಆದರೆ, ಅವರ ಗೋಳು ಹೇಳಿಕೊಂಡರೆ ಪ್ರಯೋಜನವಿಲ್ಲ. ಬಡವರಿಗೆ ಕೊಡುವ ಮನೆಯಲ್ಲಿ ಲೂಟಿ ಹೊಡೆದಿದ್ದಾರೆ. ಬಡವರಿಗೆ ಅನ್ಯಾಯವಾಗಬಾರದು ಎಂದರೆ ನಿಮ್ಮ ಗೃಹ ಮಂತ್ರಿಯಾದ ಝಮೀರ್ ಅಹಮದ್ ರಾಜೀನಾಮೆ ಪಡೆದು, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.