ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸಭಾಪತಿ ಬಸವರಾಜ ಹೊರಟ್ಟಿಗೆ ಕಾಂಗ್ರೆಸ್ ದೂರು
ಬೆಂಗಳೂರು : ಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯರ ನಿಯೋಗ, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪ್ರತ್ಯೇಕ ದೂರು ನೀಡಿದೆ.
ಸೋಮವಾರ ವಿಧಾನಸೌಧದಲ್ಲಿ ಸಭಾಪತಿ ಹೊರಟ್ಟಿ ಅವರನ್ನು ಖುದ್ದು ಭೇಟಿ ಮಾಡಿದ ಪರಿಷತ್ತಿನ ಕಾಂಗ್ರೆಸ್‍ನ ಸದಸ್ಯರಾದ ಪುಟ್ಟಣ್ಣ, ಸಲೀಂ ಅಹಮ್ಮದ್, ಕೆ.ಗೋವಿಂದರಾಜು, ಸುಧಾಮ್ ದಾಸ್, ಶ್ರೀನಿವಾಸ್, ಎಸ್.ರವಿ, ದಿನೇಶ್ ಗೂಳಿಗೌಡ ನೇತೃತ್ವದ ನಿಯೋಗ ದೂರು ನೀಡಿದ್ದು, ತಕ್ಷಣವೇ ಇಬ್ಬರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಕೋರಿದೆ.
ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿ: ಎನ್.ರವಿಕುಮಾರ್, ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಮತ್ತು ಕೋಮುವಾದಿ ಹೇಳಿಕೆಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಜಾತ್ಯತೀತತೆ, ಆಡಳಿತಾತ್ಮಕ ತಟಸ್ಥತೆ ಮತ್ತು ಸಾರ್ವಜನಿಕ ಸೇವಕರಿಗೆ ಗೌರವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಅವರ ಹೇಳಿಕೆಗೆ ಔಪಚಾರಿಕ ಖಂಡನೆಯನ್ನು ಹೊರಡಿಸಬೇಕು.
ಪರಿಷತ್ತಿನಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮಗಳ ಅಡಿಯಲ್ಲಿ ರವಿಕುಮಾರ್ ವಿರುದ್ಧ ಶಿಸ್ತು ಅಥವಾ ನೈತಿಕ ಕ್ರಮಗಳನ್ನು ಶಿಫಾರಸು ಮಾಡುವುದು. ಇದರಲ್ಲಿ ಖಂಡನೆ ಅಥವಾ ಅಮಾನತು ಸೇರಿದಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸೇವೆಯು ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಕರ್ನಾಟಕವು ಜಾತ್ಯತೀತ, ಎಲ್ಲರನ್ನೂ ಒಳಗೊಂಡ ಮತ್ತು ನಿಷ್ಪಕ್ಷಪಾತ ಸಾರ್ವಜನಿಕ ಆಡಳಿತದ ಭದ್ರಕೋಟೆಯಾಗಿ ಉಳಿಯುವಂತೆ ನೋಡಿಕೊಳ್ಳಲು ಅನುಕರಣೀಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ನಾರಾಯಣಸ್ವಾಮಿ ವಿಫಲ: ಸಚಿವ ಪ್ರಿಯಾಂಕ್ ಖರ್ಗೆ ಅವರ ಕುರಿತು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವಹೇಳಕಾರಿ ಹೇಳಿಕೆ ನೀಡಿದ್ದು, ಕ್ಷಮೆಯಾಚನೆ ಬದಲಿ ಹಲವು ವೇದಿಕೆಗಳಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡುತ್ತಿದ್ದಾರೆ. ಅಲ್ಲದೆ, ವಿಪಕ್ಷ ನಾಯಕರಾಗಿ ತಮ್ಮ ಪ್ರಮಾಣ ವಚನವನ್ನು ಎತ್ತಿಹಿಡಿಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರ ವಿರುದ್ದ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಪದ ಬಳಕೆ ಸರಿಯಲ್ಲ: ‘ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಮಾತುಗಳು ಅಸಂಬದ್ಧವಾಗಿವೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಲಬುರ್ಗಿ ಜಿಲ್ಲಾಧಿಕಾರಿ ವಿರುದ್ಧ ಇಬ್ಬರು ನಾಯಕರು ಆಡಿದ ಮಾತಿನ ಬಗ್ಗೆ ಕ್ರಮ ಜರುಗಿಸಬೇಕು. ಈ ರೀತಿಯ ಪದ ಬಳಕೆ ಸರಿಯಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪರಿಷತ್ ಸದಸ್ಯ ಸಲೀಂ ಅಹ್ಮದ್ ಒತ್ತಾಯಿಸಿದರು.
ಪರಿಶೀಲಿಸಿ ಕ್ರಮ: ‘ಕಾಂಗ್ರೆಸ್ ಪಕ್ಷದ ನಾಯಕರ ನಿಯೋಗ ತಮಗೆ ದೂರು ನೀಡಿದ್ದು, ಅದನ್ನು ಸ್ವೀಕರಿಸಿದ್ದೇನೆ. ಸದನದ ನಿಯಮಗಳನ್ನ ಪರಿಶೀಲಿಸಿ ಮುಂದುವರೆಯುತ್ತೇನೆ’
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ