×
Ad

ದೇಶವನ್ನು ದುಸ್ಥಿತಿಗೆ ತರಲು ಹೊರಟ ಕಾಂಗ್ರೆಸನ್ನು ಜನತೆ ದಯನೀಯ ಸ್ಥಿತಿಗೆ ತಲುಪಿಸಿದ್ದಾರೆ: ಬಿ ವೈ ವಿಜಯೇಂದ್ರ

Update: 2025-05-16 11:30 IST

ಬೆಂಗಳೂರು: ಬಿಜೆಪಿಯವರು ತಿರಂಗಾ ಬದಲು ಟ್ರಂಪ್ ಯಾತ್ರೆ ಮಾಡಲಿ. ತಾನೇ ಸುಪ್ರೀಂ ಎಂಬ ಮೋದಿ ನಡವಳಿಕೆ ಸರಿಯಲ್ಲ ಎಂಬ ಸಚಿವ ಸಂತೋಷ್ ಲಾಡ್ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣ Xನಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಗುಲಾಮಿ ಪದ್ಧತಿಯನ್ನು ನೆನಪಿಸುವ ರೀತಿಯಲ್ಲಿ ಇಂದಿಗೂ ನೆಹರು ಮನೆತನದವರೇ ಸುಪ್ರೀಂ ಎಂದು ಪ್ರಜಾಪ್ರಭುತ್ವವನ್ನು ಅವಮಾನಿಸುವ ಭಟ್ಟಂಗಿ ಗರಡಿಯಿಂದ ಬಂದ ನೀವು, ಭಾರತದ ಸಾರ್ವಭೌಮತೆಯ ಶಕ್ತಿ ಹಾಗೂ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಲು ಹೊರಟಿರುವ ಪರಿ ‘ಆಕಾಶಕ್ಕೆ ಉಗುಳುವ’ ಮೂರ್ಖನ ವರ್ತನೆ ನೆನಪಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತದ ಸಿರಿ ಕಿರೀಟ ಕಾಶ್ಮೀರವನ್ನು ಅಸ್ಥಿರಗೊಳಿಸಿದ್ದು ಯಾರು? ರಕ್ಷಣೆ ಇಲ್ಲದ ಅಸಹಾಯಕ ಪರಿಸ್ಥಿತಿಯಲ್ಲಿ ಲಕ್ಷಾಂತರ ಮೂಲ ನಿವಾಸಿ ಕಾಶ್ಮೀರಿ ಪಂಡಿತರ ಕುಟುಂಬಗಳು ಕೊಲೆ,ಅತ್ಯಾಚಾರದ ದೌರ್ಜನ್ಯಗಳನ್ನು ಅನುಭವಿಸಿ ಕಾಶ್ಮೀರ ತೊರೆಯುವಂತಾಗಲು ಕಾರಣರಾದವರಾರು? ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಬಿಟ್ಟುಕೊಟ್ಟವರಾರು? ಅವಕಾಶವಿದ್ದರೂ POK ಆಕ್ರಮಿಸಿಕೊಳ್ಳದೇ ಕೈಚೆಲ್ಲಿದವರಾರು? ಕಾಂಗ್ರೆಸ್ ಹಾಗೂ ಅದರ ಸ್ವಾರ್ಥ ಆಡಳಿತ ಇದಕ್ಕೆಲ್ಲ ಕಾರಣ ಎನ್ನುವುದು ದೇಶದ ಜನತೆಗೆ, ಜಗತ್ತಿಗೇ ತಿಳಿದ ಸತ್ಯ ಎಂದಿದ್ದಾರೆ.

ಸಂತೋಷ್‌ ಲಾಡ್‌ ಅವರೇ, ಪಾಕಿಸ್ತಾನದ ಮೇಲೆ ಯುದ್ಧವೇ ಬೇಡ ಎಂದು ಪಾಕಿಸ್ತಾನಿ ಮಾಧ್ಯಮಗಳಿಂದ ಬೆನ್ನು ತಟ್ಟಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಸ್ಥಾನ ವಿದ್ವಾನ್ ರೀತಿ ಮಾತನಾಡುವ ನೀವು,  ರಾಷ್ಟ್ರ ಪ್ರೇಮ ಪ್ರತಿನಿಧಿಸುವ ‘ತಿರಂಗಾ ಯಾತ್ರೆ’ಯನ್ನು ವ್ಯಂಗ್ಯ ಮಾಡುತ್ತೀರಿ. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿಸುವ ನೀವು ಯಾವ ಮುಖ ಇಟ್ಟುಕೊಂಡು ‘ತಿರಂಗಾ ಯಾತ್ರೆ’ ಹಾಗೂ ಯುದ್ಧದ ಕುರಿತು ಮಾತನಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಇಂದು ವಿಶ್ವಮಟ್ಟದಲ್ಲಿ ಭಾರತವನ್ನು ಮುಂಚೂಣಿ ಸ್ಥಾನಕ್ಕೆ ತಂದು ನಿಲ್ಲಿಸಿರುವ, ಭಾರತದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವ ನಿಟ್ಟಿನಲ್ಲಿ ವ್ಯೂಹಗಳನ್ನು ಭೇದಿಸಿ ನಿಂತಿರುವ ಪ್ರಧಾನಿ  ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ, ಶತಕೋಟಿ ಭಾರತೀಯರು ಒಪ್ಪಿಕೊಂಡು ಅವರ ನಾಯಕತ್ವವನ್ನು ಅಪ್ಪಿಕೊಂಡಿದ್ದಾರೆ. ಭಾರತವನ್ನು ದುಸ್ಥಿತಿಗೆ ತರಲು ಹೊರಟಿದ್ದ ಕಾಂಗ್ರೆಸ್‌ ಅನ್ನು ದೇಶದ ಜನತೆ ಇಂದು ದಯನೀಯ ಸ್ಥಿತಿಗೆ ತಲುಪಿಸಿದ್ದಾರೆ, ಇಷ್ಟಾದರೂ ಬುದ್ಧಿ ಕಲಿಯದ ನೀವು ಕುಯುಕ್ತಿಯ ಮಾತನಾಡುವುದನ್ನು ನಿಲ್ಲಿಸುವುದೇ ಇಲ್ಲ. ಒಗ್ಗಟ್ಟಿನ ಮನೆಯಲ್ಲಿ ಒಡಕು ಮೂಡಿಸುವ, ಮತಬ್ಯಾಂಕ್ ರಾಜಕಾರಣವನ್ನು ಪೋಷಿಸಿಕೊಂಡು ಬರುವ ನಿಮ್ಮಿಂದ ಭಾರತೀಯ ಜನತಾ ಪಾರ್ಟಿ ಹಾಗೂ ಕಾರ್ಯಕರ್ತರು ಪಾಠ ಹೇಳಿಸಿಕೊಳ್ಳುವ ಪರಿಸ್ಥಿತಿ ಈ ಶತಮಾನದಲ್ಲಂತೂ ಬರುವುದಿಲ್ಲ ಎನ್ನುವ ಸತ್ಯ ಪ್ರಚಾರಕ್ಕಾಗಿ ಒಟಗುಟ್ಟುವ ನಿಮಗೆ ತಿಳಿದಿರಲಿ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News