ಸಿ.ಟಿ.ರವಿ ಸೇರಿದಂತೆ ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರಗಳೂ ಸಿಗುವುದಿಲ್ಲ; ಜೊತೆಗೆ ಸತ್ಯ, ಬದ್ಧತೆ, ಆತ್ಮಸಾಕ್ಷಿಗಳೂ ಕಾಣುವುದಿಲ್ಲ : ಪ್ರಿಯಾಂಕ್ ಖರ್ಗೆ
"ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ"
ಪ್ರಿಯಾಂಕ್ ಖರ್ಗೆ/ಸಿ.ಟಿ.ರವಿ
ಬೆಂಗಳೂರು :"ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು ಒಂದು ಸುಳ್ಳಿಗೆ ಮತ್ತೊಂದು ಸುಳ್ಳನ್ನು ಪೋಣಿಸುತ್ತಾ ಸುಳ್ಳಿನ ಹಾರವನ್ನೇ ಹಾಕಿಕೊಳ್ಳುವ ಸಿ.ಟಿ ರವಿಯಂತಹವರು ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ" ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ʼವಾರ್ತಾಭಾರತಿʼಯ ವಿಡಿಯೋ ಶೇರ್ ಮಾಡಿ, ಬರೆದುಕೊಂಡಿರುವ ಅವರು, "ಸಿ.ಟಿ ರವಿ ಸೇರಿದಂತೆ ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರಗಳೂ ಸಿಗುವುದಿಲ್ಲ, ಜೊತೆಗೆ ನೈತಿಕತೆ, ಲಜ್ಜೆ, ಸತ್ಯ, ಬದ್ಧತೆ, ಆತ್ಮಸಾಕ್ಷಿಗಳೂ ಕಾಣುವುದಿಲ್ಲ. ಕಳೆದ 3 ವರ್ಷಗಳಲ್ಲಿ ಯಾವುದೇ ಒಂದು ದೊಡ್ಡ ಮಟ್ಟದ ಕೋಮು ಕಲಹ ಸೃಷ್ಟಿಸಲು ಸಾಧ್ಯವಾಗದ ಕಾರಣ ಬಿಜೆಪಿಯವರು ಅಸಹನೀಯರಾಗಿ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾವುದೇ ವಿಷಯವಿರಲಿ, ಅದಕ್ಕೆ ಪಾಕಿಸ್ತಾನ ಮತ್ತು ಹಿಂದೂ - ಮುಸ್ಲಿಂ ವಿಷಯವನ್ನು ಜೋಡಿಸುವುದು ದ್ವೇಷಸಂಜಾತ ಬಿಜೆಪಿಯ ಹುಟ್ಟುಗುಣ, ಬಿಜೆಪಿಯವರ ಅಸ್ತಿತ್ವ ಇರುವುದೇ ಸಮಾಜ ವಿಭಜನೆಯಲ್ಲಿ ಎನ್ನುವುದನ್ನು ಪದೇ ಪದೇ ಹೇಳಬೇಕಿಲ್ಲ ಎಂದು ಟೀಕಿಸಿದ್ದಾರೆ.
NEET ವಿದ್ಯಾರ್ಥಿಗಳ ಹೋರಾಟದ ವಿಷಯದಲ್ಲೂ ಧರ್ಮಗಳನ್ನು ಎಳೆದುತಂದ ಸಿ.ಟಿ ರವಿಯವರು ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು NEET ಹೋರಾಟಕ್ಕೆ ಸಂಬಂಧವೇ ಇಲ್ಲದ ವಿಡಿಯೋ ಒಂದನ್ನ ತೋರಿಸಿ ದಿಕ್ಕು ತಪ್ಪಿಸುವ ವಿಫಲ ಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿ ಅವರೇ, ಸತ್ಯ ಹೇಳಲು ಹಿಂಜರಿಕೆ ಬೇಕಿಲ್ಲ, ಆದರೆ ಸುಳ್ಳು ಹೇಳಲು ಹಿಂಜರಿಕೆ, ನೈತಿಕ ಭಯ, ಸಾಮಾಜಿಕ ಭಯ ಇರಬೇಕಾಗುತ್ತದೆ, ಅಂತಹದ್ದು ಯಾವುದೂ ತಮಗೆ ಇಲ್ಲ ಎನ್ನುವುದನ್ನು ನಿರೂಪಿಸುತ್ತಲೇ ಇದ್ದೀರಿ. ಈ ಹಿಂದೆ ಸದನದಲ್ಲಿ ತಾವು ಆಡಿದ ಮಾತಿನಿಂದಲೇ ನಿಮ್ಮ ಗುಣ ಏನೆಂದು ರಾಜ್ಯಕ್ಕೆ ತಿಳಿದಿದೆ, ಅಂದು ತಾವು ಆಡಿದ್ದ ಮಾತಿನ ತನಿಖೆಗೆ ಇಂದಿಗೂ ಧ್ವನಿ ಸ್ಯಾಂಪಲ್ ಕೊಡದಿರುವುದು ತಮ್ಮ ಪಲಾಯನವಾದ ಮತ್ತು ಅನೈತಿಕತೆಯನ್ನು ತೋರಿಸುತ್ತದೆ. "ಕಾನೂನಿಗೆ ಸವಾಲು ಹಾಕುತ್ತೇನೆ" ಎಂಬ ನಿಮ್ಮ ದ್ರಾಷ್ಟ್ಯ ನಡೆಯುವುದಿಲ್ಲ, ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.