‘ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆಗೆ ಕಡಿವಾಣ’ | ರಾಜ್ಯಾದ್ಯಂತ ಕಠಿಣ ಕ್ರಮಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ; ಡಿಜಿ-ಐಜಿಪಿ ಸುತ್ತೋಲೆ

Update: 2026-07-27 21:29 IST

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ/ಸಾಂದರ್ಭಿಕ ಚಿತ್ರ(AI)

ಬೆಂಗಳೂರು : ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹಣೆ ಹಾಗೂ ಸಾಗಾಣಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ಉದ್ದೇಶದಿಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನದ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿ ಮತ್ತು ಐಜಿಪಿ) ರಾಜ್ಯದ ಎಲ್ಲ ಪೊಲೀಸ್ ಆಯುಕ್ತರು, ಪೊಲೀಸ್ ಮಹಾನಿರೀಕ್ಷಕರು, ಉಪ ಮಹಾನಿರೀಕ್ಷಕರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಮಗ್ರ ಸುತ್ತೋಲೆ ಹೊರಡಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ಪರಿಸರಕ್ಕೆ ಹಾನಿ ಉಂಟುಮಾಡುವುದಲ್ಲದೆ, ಕಾನೂನು ಸುವ್ಯವಸ್ಥೆ ಮತ್ತು ಸರಕಾರದ ಆದಾಯಕ್ಕೂ ಧಕ್ಕೆ ತರುತ್ತಿದೆ. ಇಂತಹ ಅಕ್ರಮ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸದ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಸರಕಾರ ಅನುಸರಿಸುತ್ತಿದ್ದು, ರಾಜ್ಯಾದ್ಯಂತ ಕಟ್ಟುನಿಟ್ಟಿನ ಜಾರಿಯನ್ನು ಖಚಿತಪಡಿಸಲು ಈ ಸುತ್ತೋಲೆ ಹೊರಡಿಸಲಾಗಿದೆ.

ಸುತ್ತೋಲೆಯಲ್ಲಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಈಗಾಗಲೇ ರಚಿಸಲಾಗಿರುವ ಟಾಸ್ಕ್ ಫೋರ್ಸ್‍ಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆ ನಡೆಯುವ ಪ್ರದೇಶಗಳನ್ನು ಗುರುತಿಸಿ ನಿರಂತರ ನಿಗಾ ವಹಿಸುವುದು, ಅಕ್ರಮ ಸಾಗಾಣಿಕೆ ಮತ್ತು ಸಂಗ್ರಹಣೆಯನ್ನು ತಡೆಯುವುದು ಹಾಗೂ ಕಾನೂನು ಕ್ರಮ ಕೈಗೊಳ್ಳುವುದು ಸಂಬಂಧಿತ ಪೊಲೀಸ್ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ರಾಜ್ಯದ ಗಡಿ ಪ್ರದೇಶಗಳು ಸೇರಿದಂತೆ ಅಂತರರಾಜ್ಯ ಮಾರ್ಗಗಳಲ್ಲಿ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ತನಿಖಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಕಂಡುಬಂದರೆ ಸಂಬಂಧಿತ ಇಲಾಖೆಯ ಗಮನಕ್ಕೆ ತರುವಂತೆ ನಿರ್ದೇಶಿಸಲಾಗಿದೆ.

ಪ್ರತಿ ಪೊಲೀಸ್ ಘಟಕವು ತನ್ನ ವ್ಯಾಪ್ತಿಯಲ್ಲಿರುವ ಅಕ್ರಮ ಮರಳು ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸಿ, ಅಗತ್ಯವಿದ್ದಲ್ಲಿ ದಿಢೀರ್ ದಾಳಿ ನಡೆಸಬೇಕು. ಈ ಅಕ್ರಮ ದಂಧೆಯಲ್ಲಿ ನಿರಂತರವಾಗಿ ತೊಡಗಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆಯೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಪ್ರತಿ ತಿಂಗಳ ಅಪರಾಧ ಪರಿಶೀಲನಾ ಸಭೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆ ಹಾಗೂ ಸಂಗ್ರಹಣೆ ಪ್ರಕರಣಗಳ ಕುರಿತು ಠಾಣಾವಾರು ಪರಿಶೀಲನೆ ನಡೆಸಿ, ಅಧೀನ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು. ಅಲ್ಲದೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಿಯಮಿತವಾಗಿ ನಡೆಸಿ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.

ಯಾವುದೇ ಪೊಲೀಸ್ ಘಟಕವು ತನ್ನ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ತಡೆಯುವಲ್ಲಿ ವಿಫಲವಾದರೆ, ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಅಕ್ರಮ ಚಟುವಟಿಕೆ ಸಹಿಸುವುದಿಲ್ಲ: ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ರಾಜ್ಯದ ನೈಸರ್ಗಿಕ ಸಂಪತ್ತಿನ ಲೂಟಿ ಮಾತ್ರವಲ್ಲ, ಇದು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸವಾಲು ಎಸೆಯುವ ಗಂಭೀರ ಅಪರಾಧವಾಗಿದೆ. ಸರಕಾರ ಯಾವುದೇ ಅಕ್ರಮ ಚಟುವಟಿಕೆಯನ್ನು ಸಹಿಸುವುದಿಲ್ಲ. ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

‘ಕಾನೂನು ಲೋಪವಾಗದಂತೆ ಕಣ್ಗಾವಲು’: ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು. ಜೊತೆಗೆ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಮತ್ತು ಕಾನೂನು ಲೋಪವಾಗದಂತೆ ಕಣ್ಗಾವಲು ಇರಿಸುವುದು ಸರಕಾರದ ಆದ್ಯತೆಯಾಗಿದೆ.

-ಪ್ರಿಯಾಂಕ್ ಖರ್ಗೆ, ಗೃಹ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News