‘ಕೆಪಿಎಸ್‍ಸಿ ಅಕ್ರಮ’ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

Update: 2026-07-27 19:01 IST

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ)ದಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ 80 ಲಕ್ಷ ರೂ.ಗಳ ವರೆಗೆ ಲಂಚ ಪಡೆದಿರುವ ಗಂಭೀರ ಆರೋಪಗಳಿದ್ದು, ಸಿಬಿಐ ಅಥವಾ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ನಿಯೋಗವು ಆಗ್ರಹಿಸಿದೆ.

ಸೋಮವಾರ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗವು, ಕೆಪಿಎಸ್‍ಸಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಿತು. ಈ ಹಗರಣವು ಕರ್ನಾಟಕ ರಾಜ್ಯದ ಸಾವಿರಾರು ಮಂದಿ ಉದ್ಯೋಗಾಕಾಂಕ್ಷಿಗಳ ನಂಬಿಕೆಗೆ ಆಘಾತ ನೀಡಿವೆ. ಇಂತಹ ಸಂದರ್ಭದಲ್ಲಿ ಕೆಪಿಎಸ್‍ಸಿಯೇ ತನ್ನ ವಿರುದ್ಧದ ಆರೋಪಗಳನ್ನು ಆಂತರಿಕವಾಗಿ ತನಿಖೆ ನಡೆಸುವುದರಿಂದ ಸತ್ಯ ಹೊರಬರುವುದಿಲ್ಲ, ಸಾರ್ವಜನಿಕರ ವಿಶ್ವಾಸವೂ ಮೂಡುವುದಿಲ್ಲ ಎಂದು ಹೇಳಿದೆ.

ಈ ನಿಟ್ಟಿನಲ್ಲಿ ಆಂತರಿಕ ತನಿಖೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಅಲ್ಲದೇ, ಪ್ರಕರಣವನ್ನು ಸಿಬಿಐ ಅಥವಾ ಕರ್ನಾಟಕ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿ ನೇತೃತ್ವದ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಇದು ಕೇವಲ ಒಂದು ನೇಮಕಾತಿಯ ಪ್ರಶ್ನೆಯಲ್ಲ. ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮೀಸಲಿಟ್ಟಿರುವ ಲಕ್ಷಾಂತರ ಯುವಕರ ಕನಸು, ಪರಿಶ್ರಮ ಮತ್ತು ನ್ಯಾಯಯುತ ಹಕ್ಕಿನ ಪ್ರಶ್ನೆಯಾಗಿದೆ ಎಂದು ಬಿಜೆಪಿ ಮನವಿಯಲ್ಲಿ ಉಲ್ಲೇಖಿಸಿದೆ.

ವಿಶ್ವಾಸಾರ್ಹತೆ ಇಲ್ಲದ ಕಾಟಾಚಾರದ ತನಿಖೆಯಿಂದ ಯಾರಿಗೂ ಪ್ರಯೋಜನವಿಲ್ಲ. ಕೆಪಿಎಸ್‍ಸಿಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ಸಂಪೂರ್ಣ ಸ್ವತಂತ್ರ ತನಿಖೆಯೊಂದೇ ಮಾರ್ಗ. ಉದ್ಯೋಗಾಕಾಂಕ್ಷಿ ಯುವಜನರ ಹಕ್ಕುಗಳಿಗಾಗಿ ಬಿಜೆಪಿ ಹೋರಾಟ ನಿರಂತರವಾಗಿ ನಡೆಸಲಿದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News