ಸವಿತಾ ಸಮಾಜದ ಗೌರವಕ್ಕೆ ಧಕ್ಕೆ ತರುವಂತ ಹೇಳಿಕೆ ನೀಡಿದ ಸಿ.ಟಿ.ರವಿ ಕ್ಷಮೆ ಕೇಳಬೇಕು: ಕಾಂಗ್ರೆಸ್ ಆಗ್ರಹ
ಬೆಂಗಳೂರು: ಸವಿತಾ ಸಮಾಜದ ಗೌರವಕ್ಕೆ ಧಕ್ಕೆ ತರುವಂತ ಹೇಳಿಕೆ ನೀಡಿದ ವಿಧಾನಪರಿಷತ್ತಿನ ಸದಸ್ಯ ಸಿ.ಟಿ ರವಿ ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಬಿಜೆಪಿ ಪಕ್ಷವು ಕೂಡಲೇ ರಾಜ್ಯದ ಜನರ ಹಾಗೂ ಸವಿತಾ ಸಮಾಜದ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಬುಧವಾರ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಸಿ.ಟಿ.ರವಿ ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಸದನದೊಳಗೆ ಮಹಿಳಾ ಸಚಿವರನ್ನು ಅತ್ಯಂತ ಕೀಳಾಗಿ ನಿಂದಿಸಿ ತನ್ನ ಕೊಳಕು ನಾಲಿಗೆಯನ್ನು ಪ್ರದರ್ಸಿಸಿದ್ದ ಬಿಜೆಪಿಯ ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸವಿತಾ ಸಮಾಜದ ಬಗ್ಗೆ ತುಚ್ಛವಾಗಿ ಮಾತನಾಡಿ ಅವಮಾನಿಸಿರುವ ಮಾತುಗಳು ಅವರ ವೈಯಕ್ತಿಕ ನಿಲುವು ಮಾತ್ರವಲ್ಲ ಬಿಜೆಪಿಯ ಸಂಸ್ಕೃತಿ ಮತ್ತು ಸಂಘ ಶಿಕ್ಷಣದ ನೈಜ ಸಂಸ್ಕಾರ. ಮಹಿಳೆಯರು, ದಲಿತರು, ಹಿಂದುಳಿದ ಜಾತಿಗಳ ಬಗ್ಗೆ ಎಂದಿಗೂ ಗೌರವವಿಲ್ಲದ ರಾಜ್ಯ ಬಿಜೆಪಿ ನಾಯಕರಿಗೆ ಆರೆಸ್ಸೆಸ್ ಹೇಳಿಕೊಟ್ಟಿರುವುದು ಇದೇ ಮನುಸ್ಮೃತಿ ಪ್ರೇರಿತ ‘ಜಾತಿ ನಿಂದನೆ'ಯ ಪಾಠವನ್ನೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.