ನಾವಿರುವವರೆಗೂ ಎಸ್ಕಾಂಗಳ ಖಾಸಗಿಕರಣಕ್ಕೆ ಅವಕಾಶವಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : “ನಾನು, ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರುವವರೆಗೂ ರಾಜ್ಯದಲ್ಲಿರುವ ಎಸ್ಕಾಂಗಳನ್ನು ಖಾಸಗೀಕರಣ ಮಾಡಲು ಅವಕಾಶ ನೀಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಕರ್ನಾಟಕ ಪ್ರಸರಣ ನಿಗಮ ನೌಕರರ ಸಂಘದ 60ನೇ ವಜ್ರ ಮಹೋತ್ಸವ ಸಂಭ್ರಮ ಹಾಗೂ ವಜ್ರಜ್ಯೋತಿ ಸ್ಮರಣ ಸಂಚಿಕೆ ಲೋಕಾರ್ಪಣೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ನಾನು ಇಂಧನ ಸಚಿವನಾದ ಬಳಿಕ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಮುಂಬೈ, ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಎಸ್ಕಾಂಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ಹೀಗಾಗಿ ಬೆಂಗಳೂರಿನಲ್ಲೂ ಖಾಸಗಿಯವರಿಗೆ ನೀಡಬೇಕು ಎಂದು ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಆಗ ನಾನು ಅವರಿಗೆ ನಮ್ಮ ನೌಕಕರು, ಇಂಜಿನಿಯರ್ ಗಳು, ವ್ಯವಸ್ಥಾಪಕ ಮಂಡಳಿಯವರು ಬಹಳ ಶಕ್ತಿಶಾಲಿಯಾಗಿದ್ದು ಎಸ್ಕಾಂಗಳನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದೆ. ರಾಜ್ಯದಲ್ಲಿ ಈ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರು ಇರುವವರೆಗೂ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದರು.
“ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ, 19-20% ಟ್ರಾನ್ಸ್ ಮಿಷನ್ ನಷ್ಟ ಆಗುತ್ತಿತ್ತು. ನಾವು ಅದನ್ನು 10%ಗೆ ಇಳಿಸಿದ್ದೇವೆ. ಇದು ದೇಶಕ್ಕೆ ಮಾದರಿ. ಬೇರೆ ರಾಜ್ಯಗಳಲ್ಲಿ ಇಂದಿಗೂ 17-18% ನಷ್ಟವಾಗುತ್ತಿದೆ. ನಿಮ್ಮೆಲ್ಲರ ಶ್ರಮದಿಂದ ಇಂದು ಈ ಇಂಧನ ಇಲಾಖೆ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ಜಾರ್ಜ್ ಅವರು ಈ ಇಲಾಖೆಯ ಜವಾಬ್ದಾರಿ ತೆಗೆದುಕೊಂಡು ಪಾರದರ್ಶಕವಾಗಿ ಬಹಳ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ನಾವು ಈ ಹಿಂದೆ ಅನೇಕ ಕ್ರಾಂತಿಕಾರಕ ತೀರ್ಮಾನ ಮಾಡಿದ್ದೆವು” ಎಂದು ತಿಳಿಸಿದರು.
ಪಾರದರ್ಶಕವಾಗಿ 24 ಸಾವಿರ ಸಿಬ್ಬಂದಿ ನೇಮಕ :
“ನಾನು ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ ರಾಜ್ಯದಲ್ಲಿ 11 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಇಲಾಖೆ ಜವಾಬ್ದಾರಿ ಬಿಡುವಾಗ ರಾಜ್ಯದಲ್ಲಿ 23 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಇಲಾಖೆಯಲ್ಲಿ ಒಂದು ರೂಪಾಯಿ ಲಂಚ ಪಡೆಯದೇ, ಪಾರದರ್ಶಕವಾಗಿ 24 ಸಾವಿರ ನೌಕರರನ್ನು ನೇಮಕಾತಿ ಮಾಡಿದೆ. ಈ ಹಿಂದೆ ಇದ್ದ ವಿದ್ಯುತ್ ಶಕ್ತಿ ಮಂತ್ರಿಗಳು ನೇಮಕಾತಿಗೆ ವಸೂಲಿ ಮಾಡುತ್ತಿದ್ದರು. ನಾನು ಅದನ್ನು ತಪ್ಪಿಸಿ, ನಿಮ್ಮ ಮನೆ ಬಾಗಿಲಿಗೆ ನೌಕರಿಯನ್ನು ಕೊಟ್ಟ ತೃಪ್ತಿ ನನಗಿದೆ” ಎಂದರು.
ರೈತರಿಂದ ಭೂಮಿ ಖರೀದಿಸದೇ ಸೋಲಾರ್ ಪಾರ್ಕ್ ನಿರ್ಮಾಣ :
“ಪವನ ಶಕ್ತಿ, ಸೌರಶಕ್ತಿ, ಬೆಂಗಳೂರು ನಗರದಲ್ಲಿ ಅನಿಲ ಉತ್ಪಾದನೆ ವಿಚಾರವಾಗಿ ನಾವು ಅನೇಕ ತೀರ್ಮಾನ ಮಾಡಿದ್ದೆವು. ಅದರ ಪರಿಣಾಮವಾಗಿ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಬಂಡವಾಳ ಹೂಡಿಕೆದಾರರು ಆಸಕ್ತಿ ತೋರಿದರು. ಪಂಪ್ ಸ್ಟೋರೇಜ್ ಪವರ್ ಅನ್ನು ಹೊಸದಾಗಿ ಆರಂಭಿಸುತ್ತಿದ್ದು, ಸವದತ್ತಿ ಹಾಗೂ ವರಾಹಿಯಲ್ಲಿ ನಿರ್ಮಿಸಲು ಮುಂದಾಗಿದ್ದೇವೆ. ರೈತರಿಗೆ ಹಗಲಿನಲ್ಲಿ ವಿದ್ಯುತ್ ನೀಡಲು ಪ್ರತಿ ತಾಲೂಕಿನಲ್ಲಿ 20-50 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲು ತೀರ್ಮಾನ ಮಾಡಿದ್ದೇವೆ. ಇನ್ನು ಪಾವಗಡ ಸೌರಶಕ್ತಿ ಉತ್ಪಾದನಾ ಕೇಂದ್ರ ಸ್ಥಾಪಿಸುವಾಗ ಅಲ್ಲಿನ ಕೃಷಿ ಭೂಮಿ ಬೆಲೆ ಕೇವಲ 50 ಸಾವಿರ ಇತ್ತು. ಆದರೂ ರೈತರಿಂದ ಭೂಮಿ ಖರೀದಿ ಮಾಡದೇ ಪ್ರತಿ ವರ್ಷ ಅವರಿಗೆ ಪ್ರತಿ ಎಕರೆಗೆ 18 ಸಾವಿರ ಬಾಡಿಗೆ ನೀಡಿ ಈ ಯೋಜನೆಯನ್ನು ಜಾರಿ ಮಾಡಿದ್ದೇವೆ. ಈಗ ಅವರಿಗೆ ವರ್ಷಕ್ಕೆ 26-27 ಸಾವಿರ ಬಾಡಿಗೆ ಬರುತ್ತಿದೆ. ಈಗಲೂ ಅಲ್ಲಿನ ರೈತರು ಈ ಜಾಗದ ಮಾಲೀಕರೇ ಆಗಿದ್ದಾರೆ” ಎಂದು ತಿಳಿಸಿದರು.
“ನಿಮ್ಮ ಬೇಡಿಕೆಗಳು ನಮ್ಮ ಗಮನದಲ್ಲಿವೆ. ಒಪಿಎಸ್ ಕೂಡ ನಮ್ಮ ಪ್ರಣಾಳಿಕೆಯಲ್ಲಿದೆ. ಆ ಬಗ್ಗೆ ಚಿಂತೆ ಮಾಡಬೇಡಿ. ಈ ಹಿಂದೆ ಬಡ್ತಿ ವಿಚಾರ ಬಂದಾಗ ನಾನು ಒಂದೇ ದಿನ ತೀರ್ಮಾನ ಮಾಡಿದ್ದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ನಿಮ್ಮ ಬದುಕಿಗಾಗಿ ಕೆಲಸ ಮಾಡುತ್ತದೆ. ಐಪಿಎಸ್ ಅಧಿಕಾರಿಗೆ ಎಷ್ಟು ವೇತನ ಬರುತ್ತದೋ ಅಷ್ಟೇ ವೇತನ ಕೆಪಿಟಿಸಿಎಲ್ ಹಾಗೂ ಎಸ್ಕಾಂ ಮುಖ್ಯ ಇಂಜಿನಿಯರ್ ಗಳಿಗೂ ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಜತೆಗಿರಲಿ” ಎಂದು ತಿಳಿಸಿದರು.