ಕೃಷ್ಣಾ ನದಿ ನೀರಿನ ಹಂಚಿಕೆ ವಿಚಾರ | ಕೇಂದ್ರ ಸರಕಾರದ ಸಭೆ ಬಳಿಕ ರಾಜ್ಯದಲ್ಲಿ ಸರ್ವಪಕ್ಷ ಸಭೆ: ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು: ಕೃಷ್ಣಾ ನದಿ ನೀರಿನ ಹಂಚಿಕೆ ವಿಚಾರವಾಗಿ ನ್ಯಾಯಾಧೀಕರಣದ ತೀರ್ಪಿನ ಅನ್ವಯ ರಾಜ್ಯದ ಪಾಲಿನ ನೀರು ಬಳಕೆಗೆ ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕೆಂದು ಮೇ 7ರಂದು ಕೇಂದ್ರ ಜಲಶಕ್ತಿ ಸಚಿವರು ಕರೆದಿರುವ ಸಭೆಯಲ್ಲಿ ಒತ್ತಡ ಹಾಕಲಾಗುವುದು. ಈ ಸಭೆಯ ನಂತರ ರಾಜ್ಯದಲ್ಲಿ ಸರ್ವಪಕ್ಷ ಸಭೆ ಕರೆದು ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2010ರಲ್ಲಿ ಕೃಷ್ಣಾ ನದಿ ನ್ಯಾಯಾಧೀಕರಣ ತೀರ್ಪಿನ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸುವ ಸಂಬಂಧ ಕೇಂದ್ರ ಸರಕಾರದ ವಿರುದ್ಧ ಒತ್ತಡ ಹಾಕಿದ್ದೇವೆ. ಹೀಗಾಗಿ ಕೇಂದ್ರ ಸಚಿವರು ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಸಚಿವರ ಕರೆದಿದ್ದು, ಈ ಸಭೆಯಲ್ಲಿ ರಾಜ್ಯದ ನಿಲುವನ್ನು ಮಂಡಿಸುವ ಮುನ್ನ ಇಂದು ಪೂರ್ವಭಾವಿ ಸಭೆ ನಡೆಸಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಇಂದಿನ ಸಭೆಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಂಬಂಧಪಟ್ಟ ಎಲ್ಲಾ ಜಿಲ್ಲಾ ಸಚಿವರಾದ ಆರ್.ಬಿ ತಿಮ್ಮಾಪುರ, ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಶರಣ ಬಸಪ್ಪ ದರ್ಶನಾಪುರ ಜತೆ ಚರ್ಚೆ ಮಾಡಿದ್ದೇವೆ. ದಿಲ್ಲಿ ವಕೀಲರ ತಂಡವು ಸಭೆಯಲ್ಲಿತ್ತು. ಮೇ 7ರ ಸಭೆಯಲ್ಲಿ ನಮ್ಮ ನಿಲುವು ಏನು, ನಮ್ಮ ತಂತ್ರಗಾರಿಕೆ ಏನು ಎಂದು ಚರ್ಚೆ ಮಾಡಲಾಗಿದೆ. ಕೇಂದ್ರದ ಸಭೆಯಲ್ಲಿ ಇಡೀ ತಂಡ ರಾಜ್ಯವನ್ನು ಪ್ರತಿನಿಧಿಸಿ ರಾಜ್ಯದ ನಿಲುವು ಮಂಡಿಸುತ್ತೇವೆ ಎಂದು ಅವರು ತಿಳಿಸಿದರು.
ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಬೆಳಗಾವಿ ಅಧಿವೇಶನದಲ್ಲೇ ತೀರ್ಮಾನ ಮಾಡಿದ್ದೇವೆ. 2010ರಲ್ಲಿ ನ್ಯಾಯಾಧೀಕರಣದ ತೀರ್ಪು ಬಂದಿದ್ದು, ಈವರೆಗೂ ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. ಕಳೆದ 15 ವರ್ಷಗಳಲ್ಲಿ ನಮ್ಮ ರಾಜ್ಯಕ್ಕೆ ಭಾರಿ ನಷ್ಟವಾಗಿದೆ. ಹೀಗಾಗಿ ಈ ವಿಚಾರವಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಪ್ರತಿ ವರ್ಷ ಯೋಜನಾ ವೆಚ್ಚದ ಪ್ರಮಾಣವೂ ಏರಿಕೆಯಾಗುತ್ತಿದೆ. ನೀರು ಅನಗತ್ಯವಾಗಿ ಪೋಲಾಗುತ್ತಿದ್ದು, ಇದನ್ನು ಬಳಸಿಕೊಳ್ಳಲು ಒತ್ತಡ ಹಾಕುತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಪರಿಸ್ಥಿತಿ ಅರಿತಿದ್ದು ಸಭೆ ಕರೆದಿರುವುದು ಸ್ವಾಗತಾರ್ಹ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.