×
Ad

ಡಾ.ಜಿ.ಪರಮೇಶ್ವರ್ ಪ್ರಾಮಾಣಿಕರು, ಯಾವುದೇ ತಪ್ಪು ಮಾಡಿಲ್ಲ: ಡಿ.ಕೆ.ಶಿವಕುಮಾರ್

Update: 2025-05-22 18:00 IST

ಡಿ.ಕೆ.ಶಿವಕುಮಾರ್

ಬೆಂಗಳೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಮೇಲಿನ ಇಡಿ ದಾಳಿಗೂ ರನ್ಯಾರಾವ್ ಪ್ರಕರಣಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ. ನಾನು ಪರಮೇಶ್ವರ್ ಮನೆಗೆ ಭೇಟಿ ಮಾಡಿ ಅವರ ಜತೆ ಚರ್ಚೆ ಮಾಡಿದೆ. ನಾವು ಸಾರ್ವಜನಿಕ ಜೀವನದಲ್ಲಿದ್ದು ಬೇಕಾದಷ್ಟು ಜನ ಟ್ರಸ್ಟ್ ನಡೆಸುತ್ತಾರೆ. ಮದುವೆ ಶುಭ ಸಮಾರಂಭದಲ್ಲಿ ಅನೇಕ ಉಡುಗೊರೆಗಳು ಕೊಟ್ಟಿರಬಹುದು. ಪರಮೇಶ್ವರ್‌ಅವರಂತಹ ಪ್ರಭಾವಿ ವ್ಯಕ್ತಿ ಬೇರೆಯವರಿಗೆ ಸ್ಮಗ್ಲಿಂಗ್ ಮಾಡಲು ಹೇಳಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ಆ ಹೆಣ್ಣು ಮಗಳು ತಪ್ಪು ಮಾಡಿದ್ದರೆ ಅದು ಆಕೆಯ ವೈಯಕ್ತಿಕ ವಿಚಾರ. ತಪ್ಪು ಸಾಬೀತಾದರೆ ಆಕೆಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಪರಮೇಶ್ವರ್ ಪ್ರಕರಣದಲ್ಲಿ ಅವರು ಕಾನೂನಿಗೆ ತಲೆಬಾಗುವ ವ್ಯಕ್ತಿ. ರಾಜ್ಯದ ಗೃಹ ಸಚಿವರು, ದೊಡ್ಡ ನಾಯಕರು. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆಯಿದೆ. 1990ರಿಂದಲೂ ಅವರು ನನ್ನೊಂದಿಗೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ ಎಂದರು.

ಪರಮೇಶ್ವರ್ ಅವರ ಮನೆಗೆ ಹೋಗಿ ಭೇಟಿ ಮಾಡಿದ್ದೇನೆ. ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದೇನೆ. ಪರಮೇಶ್ವರ್ ಅವರು ಚೆನ್ನಾಗಿದ್ದಾರೆ, ಅವರು ಸಚಿವ ಸಂಪುಟ ಸಭೆಗೆ ಬರಲಿದ್ದಾರೆ. ಅವರೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಶಿವಕುಮಾರ್ ವಿವರಣೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News