ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ವಿಚಾರ | ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳುತ್ತೇವೆ: ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು : ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮಹಾರಾಷ್ಟ್ರ ಸಿಎಂ ಪತ್ರಕ್ಕೆ, ನಮ್ಮ ಮುಖ್ಯಮಂತ್ರಿಗಳು ಪತ್ರ ಬರೆದ ನಂತರ, ಈ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಸುಮ್ಮನಹಳ್ಳಿ ಮಾಗಡಿ ರಸ್ತೆಯಲ್ಲಿರುವ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಜಮೀನು ಹಾಗೂ ಜೂ.27 ರಂದು ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವ ಡಾ.ಬಾಬು ಜಗಜೀವನ್ ರಾಮ್ ಸಂಶೋಧನಾ ಸಂಸ್ಥೆಯ ಸಭಾಂಗಣವನ್ನು ವೀಕ್ಷಿಸಿದ. ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಪತ್ರಕ್ಕೆ ನಮ್ಮ ಸರಕಾರ ಎರಡು ದಿನಗಳಲ್ಲಿ ಪತ್ರ ಬರೆಯಲಿದೆ. ಈ ಕುರಿತು ನಾನು ನನ್ನ ಅಭಿಪ್ರಾಯವನ್ನು ಈಗಾಗಲೇ ಕಳುಹಿಸಿಕೊಟ್ಟಿದ್ದೇನೆ. ಸಿಎಂ ಬರೆಯುವ ಪತ್ರವನ್ನು ಎಲ್ಲ ಸಂಸದರಿಗೆ ಕಳುಹಿಸಿಕೊಡುತ್ತೇನೆ. ನಂತರ ಈ ವಿಚಾರವಾಗಿ ಚರ್ಚಿಸಲು ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ದಿನಾಂಕ ಕೇಳುತ್ತೇವೆ ಎಂದು ನುಡಿದರು.
ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರು ಬುದ್ಧಿವಂತರಿದ್ದಾರೆ. ಈ ಹಿಂದೆ ಅವರೇ ಈ ಯೋಜನೆಗೆ ಬೆಂಬಲ ನೀಡಿದ್ದರು. ಈಗ ಅವರು ಯಾಕೆ ಈ ಪತ್ರ ಬರೆದರು ಎಂದು ಅಚ್ಚರಿಯಾಗಿದೆ. ಮಳೆ ಹೆಚ್ಚಾದಾಗ ಪ್ರವಾಹ ಬರುತ್ತದೆ. ಇದನ್ನು ನಿಭಾಯಿಸುವುದು ಅವರ ಕರ್ತವ್ಯ ಎಂದು ಹೇಳಿದರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮ ಸ್ಥಳ ವೀಕ್ಷಣೆ ಮಾಡಿದ್ದು, ಈ ವರ್ಷ ಕಾರ್ಯಕ್ರಮವನ್ನು ಇಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಜತೆಗೆ, ಸಮೀಪದಲ್ಲೇ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನಿಗದಿ ಮಾಡಿದ್ದು, ಜೂ.27ರಂದು ಶಂಕುಸ್ಥಾಪನೆ ಮಾಡಲಾಗುವುದು. ಹಾಗೇ ಕೆಂಪೇಗೌಡರ ಇತಿಹಾಸ ಸಾರುವ ವಸ್ತು ಪ್ರದರ್ಶನ ಕೇಂದ್ರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.