ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ : ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು, ಫೆ. 27: ‘ನನ್ನ ಪರವಾಗಿ ಯಾರೂ ದಿಲ್ಲಿಗೆ ಹೋಗುವುದು ಬೇಡ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ದಯವಿಟ್ಟು ಯಾರೂ ನನ್ನ ಪರವಾಗಿ ದಿಲ್ಲಿಗೆ ಹೋಗುವುದು ಬೇಡ ಎಂದು ಮನವಿ ಮಾಡುತ್ತೇನೆ. ನಿಮ್ಮ ಸಮಸ್ಯೆಗಳು ಇದ್ದರೆ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೆ ಹೋಗಿ ಮನವಿ ಮಾಡಿಕೊಳ್ಳಿ. ನನ್ನ ವಿಚಾರಕ್ಕೆ ಹೋಗುವುದು ಬೇಡ’ ಎಂದು ಸ್ಪಷ್ಟಪಡಿಸಿದರು.
ಯಾವ ಶಕ್ತಿ ಪ್ರದರ್ಶನ ಇಲ್ಲ:
ಯಾವ ಶಕ್ತಿ ಪ್ರದರ್ಶನವೂ ಇಲ್ಲ. ಕೆಲವರು ವಿಶ್ರಾಂತಿ, ಅಧ್ಯಯನಕ್ಕೆ ವಿದೇಶಕ್ಕೆ ಹೋಗುತ್ತಾರೆ. ಕೆಲವರು ದಿಲ್ಲಿಗೆ ಹೋದರೆ, ಮತ್ತೆ ಕೆಲವರು ಭೋಜನ ಕೂಟದ ನೆಪದಲ್ಲಿ ಒಟ್ಟಿಗೆ ಸೇರುತ್ತಾರೆ. ಅವರ ವೈಯಕ್ತಿಕ ವಿಚಾರಕ್ಕೂ ಪಕ್ಷಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ಅವರು ವಿವರಣೆ ನೀಡಿದರು.
‘ನಾನು ಸಿಎಂ ಆಗಬೇಕೆಂದು ಕೆಲವರು ಹೇಳಿಕೆ ನೀಡುತ್ತಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಜೊತೆ ಯಾರು ಮಾತನಾಡಿಲ್ಲ. ಕೆಲವರು ಆಸೆ ಇಟ್ಟುಕೊಂಡಿದ್ದಾರೆ. ಹೊಸಬರಿಗೆ ಮಂತ್ರಿ ಆಗುವ ಆಸೆ ಇರುತ್ತದೆ. ಡಾ.ಪರಮೇಶ್ವರ್, ಎಚ್.ಕೆ.ಪಾಟೀಲ್, ಡಾ.ಮಹದೇವಪ್ಪ, ಸಿದ್ದರಾಮಯ್ಯ ಸಹಿತ ನಾವು ಈಗ ಹಳಬರಾದೆವು. ಚಿಕ್ಕ ವಯಸ್ಸಿನಲ್ಲೇ ಮಂತ್ರಿಯಾದವರು. ಇದೀಗ ಹೊಸಬರು ಮಂತ್ರಿ ಆಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ನೋಡೋಣ, ನಾನು ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಕೊನೆಗೂ ಸಿಕ್ಕ ನ್ಯಾಯ: ಶಾಸಕ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕಿದೆ. ಯಾವುದೇ ವ್ಯಕ್ತಿಗೆ ಕಿರುಕುಳ ನೀಡಬೇಕು ಎಂದರೆ ಅದಕ್ಕೆ ಒಂದು ಮಿತಿ ಇದೆ. ರಾಜಕೀಯ ಉದ್ದೇಶದಿಂದ ಮುಕ್ತಾಯಗೊಂಡಿದ್ದ ಪ್ರಕಾರಣವನ್ನು ಯಡಿಯೂರಪ್ಪ ಸರಕಾರ ಸಿಬಿಐಗೆ ಹಸ್ತಾಂತರ ಮಾಡಿ, ತೊಂದರೆ ನೀಡಲಾಗುತ್ತಿತ್ತು. ಅವರಿಗೆ ಅವರ ಕ್ಷೇತ್ರಕ್ಕೆ ಕಾಲಿಡದಂತೆ ನಿರ್ಬಂಧ ಹೇರಲಾಗಿತ್ತು. ಚುನಾವಣೆಯಲ್ಲಿ ಮತ ಕೇಳುವಂತಿಲ್ಲ ಎಂಬ ಆದೇಶವನ್ನು ಮೊದಲ ಬಾರಿಗೆ ನೀಡಲಾಗಿತ್ತು. ನಾವು ಕೋರ್ಟ್‍ಗೆ ತಲೆಬಾಗಿ ಗೌರವ ನೀಡಿದೆವು. ಇದೆಲ್ಲವನ್ನು ಗಮನಿಸಿದ ಕೋರ್ಟ್ ಜಾಮೀನು ನೀಡಿದೆ. ನಾನು ಪ್ರಕರಣದ ವಿಚಾರಣೆ ಗಮನಿಸುತ್ತಾ ಬಂದಿದ್ದೇನೆ. ಈಗ ಅವರಿಗೆ ನ್ಯಾಯ ಸಿಕ್ಕಿದೆ, ಅವರು, ಅವರ ಕುಟುಂಬ, ಕ್ಷೇತ್ರದ ಜನ ಹಾಗೂ ಅವರು ಅನುಭವಿಸಿದ ವೇದನೆ ಯಾರೂ ಮರೆಯಲು ಸಾಧ್ಯವಿಲ್ಲ. ಇದನ್ನು ನಾನೂ ಅನುಭವಿಸಿದ್ದೇನೆ. ದೇವರು ವಿನಯ್ ಕುಲಕರ್ಣಿಗೆ ಹೆಚ್ಚಿನ ಶಕ್ತಿ ನೀಡಲಿ, ನ್ಯಾಯ ಒದಗಿಸಿರುವ ನ್ಯಾಯಾಲಯಕ್ಕೆ ಗೌರವದಿಂದ ಅಭಿನಂದನೆ ಅರ್ಪಿಸುತ್ತೇವೆ ಎಂದು ಅವರು ತಿಳಿಸಿದರು.
ಆರನೇ ಹಂತಕ್ಕೆ ಒಪ್ಪಿಗೆ: ಸಂಪುಟ ಸಭೆಯಲ್ಲಿ ಕಾವೇರಿ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಿರುವುದು ಐತಿಹಾಸಿಕ ನಿರ್ಧಾರ. ಭವಿಷ್ಯದಲ್ಲಿ ಬೆಂಗಳೂರು ಬೆಳೆಯುವುದನ್ನು ಗಮನದಲ್ಲಿಟ್ಟುಕೊಂಡು 7ಸಾವಿರ ಕೋಟಿ ರೂ.ವೆಚ್ಚದಲ್ಲಿ ಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಜೈಕಾ ಸಂಸ್ಥೆ ನೆರವು ಪಡೆಯಲಾಗುತ್ತಿದೆ. ನಾನು ಸಚಿವನಾದ ಬಳಿಕ ಕಾವೇರಿಯ 6 ಟಿಎಂಸಿ ನೀರನ್ನು ಬೆಂಗಳೂರಿಗೆ ನೀಡಲು ಅನುಮೋದನೆ ನೀಡಿದ್ದೆ ಎಂದು ತಿಳಿಸಿದರು.
‘ಹಳೆ ಮೀಸಲಾತಿ ಅನುಸರಿಸಿ ಮೊದಲ ಹಂತದಲ್ಲಿ 56ಸಾವಿರ ಹುದ್ದೆಗಳ ನೇಮಕಾತಿಗೆ ತೀರ್ಮಾನ ಮಾಡಲಾಗಿದೆ. ನಾವು ಯುವಕರಿಗೆ ಮಾತು ಕೊಟ್ಟಿದ್ದು, ಅದರಂತೆ ನೇಮಕಾತಿ ಮಾಡುತ್ತೇವೆ. 1ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಕೋರ್ಟ್ ಆದೇಶಕ್ಕೆ ತಲೆಬಾಗಿ ಕಾನೂನಿನ ಅವಕಾಶವನ್ನು ಬಳಸಿಕೊಂಡು ನೇಮಕಾತಿ ಮಾಡುತ್ತೇವೆ. 2.84 ಲಕ್ಷ ಖಾಲಿ ಹುದ್ದೆಗಳನ್ನು ತುಂಬಲಾಗುವುದು’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ