ಶಾಸಕರ ವಿದೇಶ ಪ್ರಯಾಣದ ಬಗ್ಗೆ ನನಗೆ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್
"ಮುಖ್ಯಮಂತ್ರಿ ನನ್ನ ಬೆಂಬಲಕ್ಕೆ ಇದ್ದಾರೆ"
Update: 2026-02-28 20:48 IST
ಬೆಂಗಳೂರು, ಫೆ.28: ಶಾಸಕರು ಹೊಸದಿಲ್ಲಿಗೆ ಹೋಗುವುದೂ ಗೊತ್ತಿಲ್ಲ. ವಿದೇಶಕ್ಕೆ ಹೋಗುವುದೂ ಗೊತ್ತಿಲ್ಲ. ಈ ಬಗ್ಗೆ ನನ್ನನ್ನು ಯಾರೂ ಕೇಳಿಯೂ ಇಲ್ಲ, ಈ ವಿಚಾರದಲ್ಲಿ ನಾನು ಬಾಯಿ ಹಾಕುವುದೂ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರಸಕ್ತ ರಾಜಕೀಯ ಬೆಳಣಿಗೆಗಳು, ಶಾಸಕರ ದಿಲ್ಲಿ ಪ್ರವಾಸದ ಕುರಿತು ಶನಿವಾರ ನಗರದ ಚಿತ್ರಕಲಾ ಪರಿಷತ್ತಿನ ಬಳಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಅಣ್ಣನ ಹಣೆಬರಹದಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುವರು ಎನ್ನುವ ಸಹೋದರ ಡಿ.ಕೆ.ಸುರೇಶ್ ಅವರ ಮಾತಿನ ಬಗ್ಗೆ ಕೇಳಿದಾಗ, ‘ಎಲ್ಲರೂ ಅದೇ ರೀತಿ ಹೇಳುತ್ತಾರೆ. ನಾನೇನು ಆ ಸುದ್ದಿಯನ್ನು ಮಾತನಾಡಿಲಿಲ್ಲವಲ್ಲ’ ಎಂದು ಹೇಳಿದರು.
ನಿಮ್ಮ ಪರವಾಗಿ ಜನರು, ಬೆಂಬಲಿಗರು, ಶಾಸಕರು ಮಾತನಾಡುತ್ತಿದ್ದಾರೆ ಎಂದು ಕೇಳಿದಾಗ, 139 ಜನ ಶಾಸಕರು ಸೇರಿ ಮುಖ್ಯಮಂತ್ರಿಯು ನನ್ನ ಬೆಂಬಲಕ್ಕೆ ಇದ್ದೆ ಇದ್ದಾರೆ ಎಂದು ಹೇಳಿದರು.