×
Ad

ಸಿದ್ದರಾಮಯ್ಯರಿಗೆ ವಯಸ್ಸಾಗಿಲ್ಲ, ಮುಂದಿನ ಚುನಾವಣೆಗಳನ್ನು ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ : ಡಿ.ಕೆ.ಸುರೇಶ್

"ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರವೆಲ್ಲವೂ ಊಹಾಪೋಹ"

Update: 2025-11-05 19:29 IST

ಸಿಎಂ ಸಿದ್ದರಾಮಯ್ಯ/ಡಿ.ಕೆ.ಸುರೇಶ್

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ಮುಂದಿನ ಎಲ್ಲ ಚುನಾವಣೆಗಳನ್ನು ನಾವು ಎದುರಿಸುತ್ತೇವೆ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರವೆಲ್ಲವೂ ಕೇವಲ ಊಹಾಪೋಹ. ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳು ಕಾಂಗ್ರೆಸ್ ಪಕ್ಷದ ಮುಂದೆ ಇಲ್ಲ. ಸಿದ್ದರಾಮಯ್ಯರಿಗೆ ಇನ್ನು ವಯಸ್ಸಾಗಿಲ್ಲ. ಮುಂದಿನ ದಿನಗಳಲ್ಲಿ ಬರುವ ಎಲ್ಲ ಚುನಾವಣೆಗಳು ಅವರ ನೇತೃತ್ವದಲ್ಲೇ ನಡೆಯಲಿವೆ ಎಂದು ಘೋಷಿಸಿದರು.

ದಿಲ್ಲಿ ಪ್ರವಾಸ: ಮೇಕೆದಾಟು ಯೋಜನೆ ಸಂಬಂಧ ನಾಳೆ(ನ.6) ಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ. ಈ ವಿಚಾರವಾಗಿ ನಮ್ಮ ನಿಲುವು ಏನಿರಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಮತ್ತು ವಕೀಲರ ಜೊತೆ ಚರ್ಚೆ ನಡೆಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಲ್ಲಿಗೆ ತೆರಳಿದ್ದಾರೆ ಎಂದರು.

ಬಿಹಾರ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಶಿವಕುಮಾರ್ ಈ ಹಿಂದಿನಿಂದಲೂ ದಿಲ್ಲಿಗೆ ಹೋದಾಗೆಲ್ಲಾ ಕಾಂಗ್ರೆಸ್ ಕಚೇರಿಗೆ ಹೋಗುತ್ತಾರೆ, ವರಿಷ್ಠರು ಸಿಕ್ಕರೆ ಮಾತನಾಡುತ್ತಾರೆ, ಬರುತ್ತಾರೆ. ತುರ್ತಾಗಿ ಮೇಕೆದಾಟು ಪ್ರಕರಣ ವಿಚಾರಣೆಗೆ ಬಂದಿದೆ. ವಿಶೇಷ ಪೀಠ ರಚನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಈ ಪೀಠ ರಚನೆಯಿಂದ ಯಾವ ರೀತಿ ಲಾಭ ಆಗಲಿದೆ, ನಮ್ಮ ನಿಲುವು ಹೇಗಿರಬೇಕು ಎಂದು ಚರ್ಚೆ ಮಾಡಲು ತೆರಳಿದ್ದಾರೆ ಎಂದರು.

ಎಲ್ಲ ನಾಯಕರೂ ಸೇರಿ ಕಾಂಗ್ರೆಸ್ ಪಕ್ಷವಾಗಿದೆ. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅವರಿಂದ ಮಾತ್ರ ಪಕ್ಷವಿಲ್ಲ. ಎಂ.ಬಿ.ಪಾಟೀಲ್, ಡಾ.ಪರಮೇಶ್ವರ್, ಸತೀಶ್ ಜಾರಕಿಹೋಳಿ, ಡಾ.ಮಹದೇವಪ್ಪ ಸೇರಿದಂತೆ ಎಲ್ಲ ಸಮುದಾದ ನಾಯಕರು ಸೇರಿ ಪಕ್ಷ ಕಟ್ಟಿಕೊಂಡು ಬಂದಿದ್ದೇವೆ ಎಂದ ಅವರು, ಸಚಿವ ಸಂಪುಟ ಪುನರ್ ರಚನೆ ಸಿಎಂ ವಿವೇಚನೆ ಹಾಗೂ ಪಕ್ಷದ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಆಸೆ ಪಡುವುದರಲ್ಲಿ ತಪ್ಪೇನಿಲ್ಲ: ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಅಭಿಮಾನಿಗಳು ಆಸೆ ಪಡುವುದು ಸಹಜ ಪ್ರಕ್ರಿಯೆ. ಅಭಿಮಾನಿಗಳು ತಮ್ಮ ನಾಯಕರು ಸಿಎಂ ಆಗಬೇಕೆಂದು ಬಯಸುತ್ತಾರೆ. ಇದು ನಿರಂತರ ಪ್ರಕ್ರಿಯೆ. ಕೆಲವರು ಕುಮಾರಸ್ವಾಮಿ ಆಗಬೇಕು ಅಂತಾರೆ, ಮತ್ತೆ ಕೆಲವರು ವಿಜಯೇಂದ್ರ ಆಗಬೇಕು ಅಂತಾರೆ, ಮತ್ತೆ ಕೆಲವರು, ಡಾ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಬಯಸುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News