ಆರೆಸ್ಸೆಸ್ ನ ಸಭೆ, ಸಮಾರಂಭಗಳಿಗೆ ಅವಕಾಶ ನೀಡಬೇಡಿ: ಅನುಮತಿ ಕಡ್ಡಾಯಗೊಳಿಸಲು ಸರಕಾರಕ್ಕೆ ಪತ್ರ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ದ್ವೇಷ ಭಾಷಣಗಳ ಮೂಲಕ ವಿಷ ಬಿತ್ತಿ ಬೆಳೆಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರೆಸೆಸ್ಸ್) ಸಭೆ, ಸಮಾರಂಭ ಹಾಗೂ ಪಥ ಸಂಚಲನಗಳಿಗೆ ಅವಕಾಶ ಕೊಡದಂತೆ ಅನುಮತಿ ಕಡ್ಡಾಯಗೊಳಿಸಿ ಸೂಕ್ತ ಕಾನೂನು ಪಾಲನೆ ಮಾಡುವಂತೆ ಆದೇಶಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಎಚ್.ಹನುಮೇಗೌಡ, ಸಿಎಂ, ಗೃಹ ಸಚಿವ, ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿ-ಐಜಿಪಿ ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಪತ್ರದ ಬರೆದಿರುವ ಅವರು, ‘ಸಂವಿಧಾನ ಒಪ್ಪದೆ, ಸಂಘಟನೆಯನ್ನು ನೋಂದಾಯಿಸದೆ, ಸಂಘಟನೆಯ ಸಾವಿರಾರು ಕೋಟಿಗಳ ಲೆಕ್ಕ ಸರಕಾರಕ್ಕೆ ಕೊಡದೆ, ದೇಶಕ್ಕೆ ವಂಚನೆ ಮಾಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು(ಆರೆಸೆಸ್ಸ್) ದೇಶಭಕ್ತಿಯ ಹೆಸರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು, ದ್ವೇಷ ಭಾಷಣಗಳ ಮೂಲಕ, ಧರ್ಮದ ವಿಷ ಬಿತ್ತಿ ಬೆಳೆಸುತ್ತಿದೆ’ ಎಂದು ತಿಳಿಸಿದ್ದಾರೆ.
ಯುವಕರ ಪ್ರಚೋದಿಸಿ, ಕೋಮುಗಲಭೆ ಸೃಷ್ಟಿಸುತ್ತಿರುವ ಆರೆಸೆಸ್ಸ್ ಸಂಘಟನೆಗೆ ಪೊಲೀಸ್ ಅಧಿಕಾರಿಗಳು ಬೇಜವಾಬ್ದಾರಿ, ಕರ್ತವ್ಯದ್ರೋಹ, ರಾಜದ್ರೋಹದೊಂದಿಗೆ ಸಂವಿಧಾನ-ಕಾನೂನು ಧಿಕ್ಕರಿಸಿ ಸಭೆ ಸಮಾರಂಭಗಳಿಗೆ ಅನುಮತಿ ಇಲ್ಲದೆ ಪರೋಕ್ಷ ಬೆಂಬಲಿಸಿ, ಸಹಕರಿಸಿ ಭಾಗವಹಿಸುತ್ತಿರುವುದರಿಂದ ರಾಜ್ಯದ ಬೇರೆ ಸಂಘ ಸಂಸ್ಥೆ ಸಂಘಟನೆಗಳು ಇದೇ ಹಾದಿ ಹಿಡಿದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಕಷ್ಟ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇಡೀ ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸೆಸ್ಸ್) ಎಂಬ ಸಂಘಟನೆ ನೋಂದಣಿಯಾಗಿಲ್ಲ. ಅಂತಹದೊಂದು ಸಂಘಟನೆಗೆ ಕಚೇರಿಯೂ ಇಲ್ಲ ಎಂಬ ಮಾಹಿತಿಯನ್ನು ಮಾಹಿತಿ ಹಕ್ಕಿನಡಿ ಪಡೆದು ಅದರ ವಿರುದ್ಧ ಹಲವಾರು ದೂರುಗಳನ್ನು ಅನೇಕ ಕಡೆಗಳಲ್ಲಿ ಸಲ್ಲಿಸಿದ್ದೇನೆ. ಶಾಂತಿ ಸುವ್ಯವಸ್ಥೆ ಕದಡಿ ಕೋಮುಗಲಭೆಗಳಿಗೆ ಕಾರಣವಾಗುತ್ತಿರುವ ಇಂತಹ ಸಂಘಟನೆಯಿಂದಾಗಿ ಆಸ್ತಿ, ಪ್ರಾಣ ಹಾನಿಗಳು ಸಂಭವಿಸುವುದರಿಂದ ಸರಕಾರವೇ ಹೊಣೆಯಾಗುತ್ತದೆ. ಆದ್ದರಿಂದ ಆರೆಸೆಸ್ಸ್ ನಡೆಸುವ ಎಲ್ಲ ಕಾರ್ಯಕ್ರಮಗಳಿಗೆ ಅವಕಾಶ ಕೊಡದೆ ಅನುಮತಿ ಕಡ್ಡಾಯಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಎಚ್.ಹನುಮೇಗೌಡ ಮನವಿ ಮಾಡಿದ್ದಾರೆ.