ವಿಧಾನ ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಆಯ್ಕೆ

Update: 2026-08-18 13:11 IST

ಬೆಂಗಳೂರು : ಎಂ.ಕೆ.ಪ್ರಾಣೇಶ್ ರಾಜೀನಾಮೆಯಿಂದ ತೆರವಾದ ಪರಿಷತ್ತಿನ ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‍ನ ಹಿರಿಯ ಸದಸ್ಯೆ ಉಮಾಶ್ರೀ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಂಗಭೂಮಿಯಿಂದ ರಾಜಕೀಯದವರೆಗೆ ಸುದೀರ್ಘ ಸಾಧನೆಯ ಪಯಣ

ರಂಗಭೂಮಿ, ಚಲನಚಿತ್ರ, ಕಿರುತೆರೆ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಉಮಾಶ್ರೀ ಅವರು ಕನ್ನಡದ ಪ್ರಮುಖ ಕಲಾವಿದೆ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ವಿಧಾನ ಪರಿಷತ್ ಸದಸ್ಯೆಯಾಗಿದ್ದು, ಈ ಹಿಂದೆ ಕರ್ನಾಟಕ ಸರಕಾರದಲ್ಲಿ ಸಚಿವೆಯಾಗಿ ಹಾಗೂ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ಉಮಾಶ್ರೀ ಅವರು 1957ರ ಮೇ 10ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಉಮಾಶ್ರೀ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ 2011ರಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.

ಉಮಾಶ್ರೀ ಅವರ ಕಲಾ ಪಯಣ ರಂಗಭೂಮಿಯಿಂದ ಆರಂಭವಾಯಿತು. ಹವ್ಯಾಸಿ ಹಾಗೂ ವೃತ್ತಿಪರ ರಂಗಭೂಮಿಯಲ್ಲಿ 47 ವರ್ಷಗಳ ಅನುಭವ ಹೊಂದಿರುವ ಅವರು, ರಾಜ್ಯದ ಹಲವು ಪ್ರಮುಖ ರಂಗತಂಡಗಳೊಂದಿಗೆ ಕೆಲಸ ಮಾಡಿದ್ದಾರೆ. ರಂಗಭೂಮಿಯಲ್ಲಿ 7,000ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿರುವ ಅವರು, ಸುಮಾರು 200ಕ್ಕೂ ಹೆಚ್ಚು ವಿಭಿನ್ನ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಅಂತರರಾಷ್ಟ್ರೀಯ ರಂಗಭೂಮಿ ಪ್ರಶಸ್ತಿ, ಮಳವಳ್ಳಿ ಸುಂದರಮ್ಮ ರಂಗ ಪುರಸ್ಕಾರ, ಕೆ.ವಿ. ಶಂಕರೇಗೌಡ ಪ್ರಶಸ್ತಿ, ನಾಟ್ಯ ಸಮ್ಮಾನ್‌ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಉಮಾಶ್ರೀ ಅವರ ಅಭಿನಯಕ್ಕೆ ವಿಶೇಷ ಸ್ಥಾನವಿದೆ. 470ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅವರು, ಹಿಂದಿ, ತೆಲುಗು, ತಮಿಳು, ಕೊಂಕಣಿ ಹಾಗೂ ತುಳು ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಹಲವಾರು ರಾಜ್ಯ-ರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದು ಅವರ ಅಭಿನಯದ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿದೆ.

ಉಮಾಶ್ರೀ ಅವರು ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ. 2013ರಿಂದ 2018ರವರೆಗೆ ಬಾಗಲಕೋಟೆ ಜಿಲ್ಲೆಯ ತೆರದಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದರು. ಅದೇ ಅವಧಿಯಲ್ಲಿ ಕರ್ನಾಟಕ ಸರಕಾರದ ಸಚಿವೆಯಾಗಿ ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದರು. ರಾಯಚೂರು, ಬೀದರ್ ಹಾಗೂ ಬಾಗಲಕೋಟೆ ಜಿಲ್ಲೆಗಳ ಉಸ್ತುವಾರಿ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದರು.

2023ರಿಂದ ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯೆಯಾಗಿ ಮುಂದುವರಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News