×
Ad

ನಗರ್ತಪೇಟೆಯಲ್ಲಿ ಅಗ್ನಿ ಅವಘಡ | ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ : ಡಾ.ಜಿ.ಪರಮೇಶ್ವರ್

Update: 2025-08-16 20:46 IST

ಬೆಂಗಳೂರು, ಆ.16 : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಅವಘಡದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರಿಗೆ ಸರಕಾರದಿಂದ ಪರಿಹಾರ ನೀಡುವ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ಸಂಜೆ ನಗರ್ತಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‍ಎಸ್‍ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಸ್ಯಾಂಪಲ್ ಸಂಗ್ರಹಿಸಿದ್ದು, ವರದಿ ನಂತರ ಘಟನೆಗೆ ಕಾರಣ ಏನೆಂಬುದು ಗೊತ್ತಾಗಲಿದೆ ಎಂದರು.

ಇದೊಂದು ದುರದೃಷ್ಟಕರ ಘಟನೆ. ಈ ರೀತಿ ಆಗಬಾರದಾಗಿತ್ತು. ಚಿಕ್ಕ ಜಾಗದಲ್ಲಿ ನಾಲ್ಕೈದು ಮಹಡಿಯ ಕಟ್ಟಡಗಳನ್ನು ಕಟ್ಟಿದ್ದಾರೆ. ಈ ಭಾಗದಲ್ಲಿ ಸಾವಿರಾರು ಬಿಲ್ಡಿಂಗ್‍ಗಳು ಇದೇ ರೀತಿ ಇವೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಗಮನಹರಿಸಬೇಕು. ಟ್ರೇಡ್ ಲೈಸೆನ್ಸ್ ಕೊಡುವವರು ಬಿಬಿಎಂಪಿಯವರು. ಇಂತಹ ಅವಘಡಗಳಾದ ನಮಗೆ ಗೊತ್ತಾಗುತ್ತದೆ. ಬಹುತೇಕರು ಗೋಡನ್ ರೀತಿ ಮಾಡಿಕೊಂಡು, ಅಲ್ಲೇ ವಾಸವಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಸ್ಫೋಟ ಸಂಭವಿಸಿದ ಸ್ಥಳಕ್ಕೂ ಭೇಟಿ: ಆ.15ರ ಶುಕ್ರವಾರದಂದು ಆಡುಗೋಡಿ ಬಳಿಯ ಚಿನ್ನಯ್ಯನ ಪಾಳ್ಯದಲ್ಲಿ ಸ್ಪೋಟ ಸಂಭವಿಸಿದ್ದ ಸ್ಥಳಕ್ಕೆ ಶನಿವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಲಿಂಡರ್ ಯಾವ ರೀತಿಯಾಗಿ ಸೋರಿಕೆಯಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ. 10 ಅಡಿ ಜಾಗದಲ್ಲಿರುವ ಮನೆಗಳಿವೆ. ಸಿಎಂ ಅವರು ಭೇಟಿ ಕೊಟ್ಟು, ಮಗುವಿನ ತಂದೆ ತಾಯಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಸಚಿವ ಝಮೀರ್ ಅಹ್ಮದ್ ಅವರು ಸರಕಾರದ ವತಿಯಿಂದ ಮನೆ ಕಟ್ಟಿಸಿಕೊಡುತ್ತೇವೆ ಎಂದಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News