×
Ad

ಮೆಟ್ರೊದಲ್ಲಿ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆ ತಡೆಹಿಡಿಯಬೇಕು : ಡಾ.ಪುರುಷೋತ್ತಮ ಬಿಳಿಮಲೆ

Update: 2025-03-17 18:33 IST

ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ನಮ್ಮ ಮೆಟ್ರೋ ಸಂಸ್ಥೆ ಕೂಡಲೇ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆಯನ್ನು ತಡೆಹಿಡಿಯಬೇಕು. ಹಿಂದಿನ ನೇಮಕಾತಿ ಅಧಿಸೂಚನೆಗಳಲ್ಲಿ ನೇಮಕಗೊಂಡ ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಈ ಕುರಿತು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಕನ್ನಡ ಕಲಿಯದ ಕನ್ನಡೇತರರನ್ನು ಕೂಡ ಸೇವೆಯಿಂದ ಬಿಡುಗಡೆ ಮಾಡಬೇಕು ಮತ್ತು ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸಂಪೂರ್ಣವಾಗಿ ಕನ್ನಡಿಗರನ್ನೇ ನೇಮಕ ಮಾಡಬೇಕು ಎಂದು ತಿಳಿಸಿದ್ದಾರೆ.

ನಮ್ಮ ಮೆಟ್ರೊ ಸಂಸ್ಥೆಯಲ್ಲಿ ಅನ್ಯ ಭಾಷಿಕರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಅನುಕೂಲ ಮಾಡಿಕೊಡುವ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿರುವ ವಿಷಯವು ಕನ್ನಡಿಗರಿಗೆ ವೇದನೆಯನ್ನು ತರುವ ಸಂಗತಿಯಾಗಿದೆ. ಇವು ಕೇವಲ ತಾತ್ಕಲಿಕ ಹುದ್ದೆಗಳೆಂದು ನಿಮ್ಮ ಸಂಸ್ಥೆಯು ನೀಡಿರುವ ಸಮಜಾಯಿಷಿ ಕನ್ನಡಿಗರ ವೇದನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕರ್ನಾಟಕದ ಸಂಸ್ಥೆಯೊಂದು ಅನ್ಯ ಭಾಷಿಕರಿಗೆ ನೀಡುವ ಈ ರೀತಿಯ ಆಹ್ವಾನ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಕನ್ನಡಿಗರ ಆತ್ಮಸ್ಥೆರ್ಯವನ್ನು ಕಸಿಯುವುದಷ್ಟೇ ಅಲ್ಲ, ಇದು ಸಾಂವಿಧಾನಿಕ ಆಶಯಗಳ ಸಂಪೂರ್ಣ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ.

ನೇಮಕಾತಿ ನಿಯಮಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆಯನ್ನು ಉಲ್ಲೇಖಿಸಿದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು. ತಾಂತ್ರಿಕ ಹುದ್ದೆಯ ನೆಪವೊಡ್ಡಿ ಕನ್ನಡಿಗರನ್ನು ನೇಮಕಾತಿ ಪ್ರಕ್ರಿಯೆಯಿಂದ ದೂರವಿರಿಸುವುದು ಯಾವುದೇ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲದ ಅಂಶ. ಅಂತೆಯೇ ನೇಮಕಗೊಂಡ ಕನ್ನಡೇತರರಿಗೆ ಆದ್ಯತೆ ಮೇರೆಗೆ ಕನ್ನಡವನ್ನು ಕಲಿಸಬೇಕಾದುದು ಸಹ ನಮ್ಮ ಮೆಟ್ರೊ ಸಂಸ್ಥೆಯ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಸಂಸ್ಥೆ ಕೂಡಲೇ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆಯನ್ನು ತಡೆಹಿಡಿಯಬೇಕು. ಹಿಂದಿನ ನೇಮಕಾತಿ ಅಧಿಸೂಚನೆಗಳಲ್ಲಿ ನೇಮಕಗೊಂಡ ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ಮುಂದಾಗಬೇಕು. ಕನ್ನಡ ಕಲಿಯದ ಕನ್ನಡೇತರರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು ಮತ್ತು ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸಂಪೂರ್ಣವಾಗಿ ಕನ್ನಡಿಗರನ್ನೇ ನೇಮಕ ಮಾಡಬೇಕೆಂದು ಈ ಮೂಲಕ ನಿಮಗೆ ತಿಳಿಸಬಯಸುತ್ತೇನೆ. ಮೆಟ್ರೋ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಯ ಕುರಿತಂತೆ ಇಷ್ಟರಲ್ಲಿಯೇ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News