×
Ad

ಸೆಪ್ಟೆಂಬರ್‌ನಲ್ಲಿ ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಲೋಕಾರ್ಪಣೆ : ಡಾ.ಶರಣಪ್ರಕಾಶ್ ಪಾಟೀಲ್

Update: 2025-08-14 19:51 IST

ಬೆಂಗಳೂರು, ಆ.14 : ಚಿಕ್ಕಮಗಳೂರು ಜಿಲ್ಲೆಯ ನಾಗರಿಕರ ಬಹುದಿನಗಳ ಕನಸಾದ ವೈದ್ಯಕೀಯ ಕಾಲೇಜು ಸೆಪ್ಟೆಂಬರ್ ತಿಂಗಳಿನಲ್ಲಿ ಲೋಕಾರ್ಪಣೆಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆ ಕಲಾಪದಲ್ಲಿ ಈ ಮಾಹಿತಿ ನೀಡಿದ ಅವರು, 433.94 ಕೋಟಿ ರೂ. ವೆಚ್ಚದಲ್ಲಿ ಈ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಮಂಜೂರಾತಿ ನೀಡಿ ಕಾಮಗಾರಿ ಆರಂಭಿಸಲಾಗಿತ್ತು. ಈದೀಗ ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಸಣ್ಣಪುಟ ಕೆಲಸಗಳು ಮುಂದಿನ ಕೆಲವೆ ದಿನಗಳಲ್ಲಿ ಮುಗಿಯಲಿದೆ ಎಂದರು.

ಸೆಪ್ಟೆಂಬರ್ ಕೊನೆಯ ವಾರದಲ್ಲಿ ಈ ವೈದ್ಯಕೀಯ ಕಾಲೇಜಿನ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸ್ಥಳೀಯ ಶಾಸಕರೊಂದಿಗೆ ಎರಡು ಮೂರು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 174 ಕೋಟಿ ರೂ.: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. 174 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾರ್ಯವೂ ನಡೆಯುತ್ತಿದೆ. ಇದಕ್ಕಾಗಿ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಮುಂದಿನ ಫೆಬ್ರವರಿಯೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಇದನ್ನು ಕೂಡ ಎರಡು ಬಾರಿ ಖುದ್ದಾಗಿ ಪರಿಶೀಲಿಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಿದ್ದೇನೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ನರ್ಸಿಂಗ್‌ ಕಾಲೇಜು: ನರ್ಸಿಂಗ್‌ ಕಾಲೇಜು ಆರಂಭಿಸಬೇಕೆಂದು ಶಾಸಕರು ಮನವಿ ಸಲ್ಲಿಸಿದ್ದರು. ಅದನ್ನು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶರಣ ಪ್ರಕಾಶ್ ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News