‘ದಸರಾ ಉತ್ಸವ’ ಸೆ.27ರಂದು ವೈಮಾನಿಕ ಪ್ರದರ್ಶನ
ಸಾಂದರ್ಭಿಕ ಚಿತ್ರ
ಮೈಸೂರು, ಸೆ.21: ಮೈಸೂರು ದಸರಾ ಮಹೋತ್ಸವ-2025ರ ಪ್ರಯುಕ್ತ ಸೆ.27ರ ಸಂಜೆ 4 ಗಂಟೆಗೆ ಬನ್ನಿಮಂಟಪದಲ್ಲಿ ವೈಮಾನಿಕ ಪ್ರದರ್ಶನ ಹಾಗೂ ಸೆ.28 ಮತ್ತು 29ರಂದು ಅದೇ ಮೈದಾನದಲ್ಲಿ ಸಂಜೆ 6 ಗಂಟೆಗೆ ‘ಡ್ರೋನ್ ಶೋ' ಆಯೋಜಿಸಲಾಗಿದೆ.
ಅ.1ರಂದು ಬನ್ನಿಮಂಟಪದ ಮೈದಾನದಲ್ಲಿ ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನ ಮತ್ತು ಪಂಜಿನ ಕವಾಯಿತು ಪೂರ್ವಾಭ್ಯಾಸದ ಕಾರ್ಯಕ್ರಮ ಜರುಗಲಿದೆ. ಅ.2ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತದೆ. ಅದೇ ದಿನ ಸಂಜೆ 6ಗಂಟೆಗೆ ಬನ್ನಿ ಮಂಟಪದ ಮೈದಾನದಲ್ಲಿ ಪಂಜಿನ ಕವಾಯಿತು ನಡೆಯಲಿದೆ.
ಅರಮನೆ ಆವರಣದಲ್ಲಿ ಮತ್ತು ಬನ್ನಿಮಂಟಪದ ಮೈದಾನದಲ್ಲಿ ಲಭ್ಯವಿರುವ ಆಸನಗಳನ್ನು ಗಮನದಲ್ಲಿಟ್ಟುಕೊಂಡು ವೀಕ್ಷಕರಿಗೆ ಟಿಕೆಟ್ ಮತ್ತು ಪಾಸ್‍ಗಳನ್ನು ನೀಡಲಾಗುವುದು ಹಾಗೂ ಅಧಿಕೃತ ಟಿಕೆಟ್ ಮತ್ತು ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭದ್ರತೆ, ಶಿಷ್ಟಾಚಾರ, ಆದ್ಯತೆ, ಸ್ಥಳದಲ್ಲಿ ಲಭ್ಯವಿರುವ ಸೌಕರ್ಯ ಹಾಗೂ ಸಾರ್ವಜನಿಕ ಸುರಕ್ಷತೆ ಮತ್ತು ಜನಸಮೂಹ ನಿಯಂತ್ರಣ ಮಾನದಂಡಗಳ ಅನುಗುಣವಾಗಿ ಪಾಸ್-ಟಿಕೆಟ್‍ಗಳನ್ನು ವಿತರಿಸಲಾಗುತ್ತದೆ. ಈ ಕಾರ್ಯಕ್ರಮಗಳಿಗೆ ಟಿಕೆಟ್‍ಗಳನ್ನು ಆನ್‍ಲೈನ್ www.mysoredasara.gov.in ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.