×
Ad

ಶಾಸಕ ಸತೀಶ್ ಸೈಲ್ ನಿವಾಸ ಸಹಿತ ವಿವಿಧೆಡೆ ಈ.ಡಿ. ಶೋಧ : ಕೋಟ್ಯಂತರ ರೂ.ನಗದು, ಕೆ.ಜಿ.ಗಟ್ಟಲೆ ಚಿನ್ನ ಜಪ್ತಿ

Update: 2025-08-15 19:28 IST

ಸತೀಶ್ ಸೈಲ್‍

ಬೆಂಗಳೂರು, ಆ.15: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜಾಮೀನಿನ ಮೇರೆಗೆ ಹೊರಗಿರುವ ಶಾಸಕ ಸತೀಶ್ ಸೈಲ್‍ಗೆ ಸಂಬಂಧಿಸಿದಂತೆ ದೇಶದ ವಿವಿಧ ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.) ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು ಹಾಗೂ ಕೆ.ಜಿಗಟ್ಟಲೆ ಚಿನ್ನ ವಶಕ್ಕೆ ಪಡೆದಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್‍ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಈ.ಡಿ. ಅಧಿಕಾರಿಗಳು ಆಗಸ್ಟ್ 13 ಮತ್ತು 14ರಂದು ಕಾರವಾರದಲ್ಲಿ ಶಾಸಕರ ನಿವಾಸ, ಗೋವಾ, ಮುಂಬೈ ಹಾಗೂ ಹೊಸದಿಲ್ಲಿ ಸಹಿತ ವಿವಿಧೆಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲಾತಿಗಳು ದೊರೆತಿವೆ. ಇದಕ್ಕೆ ಪೂರಕವಾಗಿ ಇಮೇಲ್ ಮಾಡಿರುವುದು ಗೊತ್ತಾಗಿದೆ. ತಪಾಸಣೆ ವೇಳೆ 1.68 ಕೋಟಿ ನಗದು, 6.75 ಕೆ.ಜಿ. ಮೌಲ್ಯದ ಚಿನ್ನದ ಬಿಸ್ಕತ್‍ಗಳು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 14.13 ಕೋಟಿ ರೂ. ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಈ.ಡಿ. ಅಧಿಕಾರಿಗಳು ಎಕ್ಸ್‌ ನಲ್ಲಿ ಮಾಹಿತಿ ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಸತೀಶ್ ಮನೆಯಲ್ಲಿ ಅಧಿಕಾರಿಗಳು ಸತತ 22 ಗಂಟೆಗಳ ಕಾಲ ಶೋಧ ಕಾರ್ಯ ಕೈಗೊಂಡಿದ್ದರು. ದಾಳಿ ವೇಳೆ ಸತೀಶ್ ಮನೆಯಲ್ಲಿ ಇರಲಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಅವರ ಅಂಗರಕ್ಷಕರನ್ನು ಸಂಪರ್ಕಿಸಿದರೂ ಶಾಸಕರ ಸುಳಿವು ಬಗ್ಗೆ ಪತ್ತೆಯಾಗಿರಲಿಲ್ಲ ಎಂದು ಈ.ಡಿ. ತಿಳಿಸಿದೆ.

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ಸತೀಶ್ ಸೈಲ್ ದೋಷಿ ಎಂದು ತೀರ್ಪು ನೀಡಿತ್ತು. ಈ ಸಂಬಂಧ ಹೈಕೋರ್ಟ್, ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಸದ್ಯ ಶಾಸಕ ಸತೀಶ್ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News