ಐಶ್ವರ್ಯಾ ಗೌಡ ವಂಚನೆ ಪ್ರಕರಣ | ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ ಈಡಿ ಸಮನ್ಸ್
ಡಿ.ಕೆ.ಸುರೇಶ್
ಬೆಂಗಳೂರು : ಚಿನ್ನದ ವ್ಯಾಪಾರಿಗೆ ಸುಮಾರು 9.82 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜೂ.19ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದಾರೆ.
ಈ.ಡಿ. ಅಧಿಕಾರಿಗಳ ಸಮನ್ಸ್ ಸ್ವೀಕರಿಸಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಜೂ.19ರಂದು ವಿಚಾರಣೆಗೆ ಹಾಜರಾಗುವುದು ಕಷ್ಟ, ಆದ್ದರಿಂದ ಜೂ.23ರಂದು ಹಾಜರಾಗುವುದಾಗಿ ಕಾಲಾವಕಾಶ ಕೋರಿ ಈ.ಡಿ.ಗೆ ಪ್ರತಿಕ್ರಿಯಿಸಿದ್ದಾರೆ.
ಈ.ಡಿ. ಸಮನ್ಸ್ ನೀಡಿರುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ನನಗೆ ಈ.ಡಿ. ಅಧಿಕಾರಿಗಳಿಂದ ಸಮನ್ಸ್ ಬಂದಿರುವುದು ನಿಜ. ಆದರೆ, ಐಶ್ವರ್ಯಾಗೌಡ ಜೊತೆ ಯಾವುದೇ ಹಣದ ವ್ಯವಹಾರ ಮಾಡಿಲ್ಲ. ಜೂ.19ರಂದು ವಿಚಾರಣೆಗೆ ಹಾಜರಾಗುವಂತೆ ಈ.ಡಿ.ಯವರು ಸೂಚನೆ ನೀಡಿದ್ದರು. ಆದರೆ, ಜೂ.23ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದೇನೆ. ಎರಡು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ನಾನು ಭಾಗಿಯಾಗಬೇಕಾಗಿದೆ ಎಂದರು.
ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೆ. ಸದ್ಯ ಈ.ಡಿ. ಅಧಿಕಾರಿಗಳು ಏಳೆಂಟು ದಾಖಲೆಗಳು ಬೇಕು ಎಂದಿದ್ದಾರೆ. ಈ.ಡಿ. ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.
ಪ್ರಕರಣದ ಹಿನ್ನೆಲೆ: ‘ತಾನು ಡಿ.ಕೆ.ಸುರೇಶ್ ಅವರ ಸಹೋದರಿ, ಅನೇಕ ರಾಜಕೀಯ ನಾಯಕರ ಪರಿಚಯವಿದೆ’ ಎಂದು ನಂಬಿಸಿ ಸಾಲದ ರೂಪದಲ್ಲಿ ಚಿನ್ನ ಪಡೆದು ವಂಚಿಸಿದ ಆರೋಪ ಐಶ್ವರ್ಯಾ ಗೌಡ ವಿರುದ್ಧ ಕೇಳಿ ಬಂದಿತ್ತು. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲಕಿ ವನಿತಾ ಎಸ್.ಐತಾಳ್ ಎಂಬುವರು ನೀಡಿದ್ದ ದೂರಿನನ್ವಯ ಐಶ್ವರ್ಯಾ ಗೌಡ, ಹರೀಶ್ ಕೆ.ಎನ್ ಹಾಗೂ ನಟ ಧಮೇರ್ಂದ್ರ ಬಿ. ಅವರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಈ.ಡಿ. ಅಧಿಕಾರಿಗಳು ಐಶ್ವರ್ಯಾ ಗೌಡ ಮನೆ ಮೇಲೆ ದಾಳಿ ನಡೆಸಿದ್ದರು.
ನನಗೂ, ಡಿ.ಕೆ.ಸುರೇಶ್‍ಗೂ ಈ.ಡಿ. ತನಿಖೆ ಹೊಸದೇನಲ್ಲ: ಡಿ.ಕೆ.ಸುರೇಶ್‍ಗೆ ಈ.ಡಿ. ಸಮನ್ಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಹೋದರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ನನಗೂ, ಡಿ.ಕೆ. ಸುರೇಶ್‍ಗೂ ಈ.ಡಿ. ಅಧಿಕಾರಿಗಳ ತನಿಖೆ ಹೊಸದೇನಲ್ಲ. ಯಾವುದೇ ತನಿಖಾ ಸಂಸ್ಥೆಗಳು ನೋಟಿಸ್ ನೀಡಿದರೂ ಸ್ವೀಕರಿಸುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ತನಿಖೆಗೆ ಹಾಜರಾಗಿ ಸಹಕಾರ ನೀಡುತ್ತೇವೆ’ ಎಂದು ಹೇಳಿದರು.
ತಮ್ಮ ಹೆಸರು ಹೇಳಿಕೊಂಡು ವಂಚನೆ ಮಾಡಿರುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಡಿ.ಕೆ.ಸುರೇಶ್ ದೂರು ನೀಡಿದ್ದರು. ವಂಚನೆಗೊಳಗಾದ ಕೆಲವರು ಬಂದು ನನ್ನನ್ನು ಭೇಟಿಯಾಗಿದ್ದರು. ಈಗ ಈ.ಡಿ. ನೋಟಿಸ್ ನೀಡಿದ್ದಾರೆ, ಗೌರವದಿಂದ ಸ್ಪೀಕರಿಸಿದ್ದೇವೆ. ಮನೆಗೆ ನೋಟಿಸ್ ಅಂಟಿಸಿ ಹೋಗುವುದಾಗಿ ಹೇಳುತ್ತಿದ್ದಾರೆ ಅಂದರು. ನಾನೇ ಈ.ಡಿ. ನೋಟಿಸ್ ಸ್ವೀಕರಿಸುವಂತೆ ಮನೆಯವರಿಗೆ ಹೇಳಿದ್ದೇನೆ. ಅಧಿಕಾರಿಗಳ ಮುಂದೆ ಹಾಜರಾಗಿ ಸ್ಪಷ್ಟೀಕರಣ ನೀಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.