ಎಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಎಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆಯಾಗಲಿದ್ದು, ಪ್ರತಿ ಯೂನಿಟ್‍ಗೆ 12ರಿಂದ 15 ಪೈಸೆಗಳಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ‘ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ’(ಕೆಇಆರ್‌ಸಿ) ನಿರ್ಧರಿಸಿದೆ.
ಈಗಾಗಲೇ 2025-26, 2026-27 ಮತ್ತು 2027-28ನೆ ಆರ್ಥಿಕ ವರ್ಷಗಳಿಗೆ ದರ ನಿಗದಿ ಮಾಡಲಾಗಿತ್ತು. ಆದರೆ, ಇದೀಗ ಎದುರಾಗಿರುವ ನಷ್ಟವನ್ನು ಸರಿದೂಗಿಸಲು ಹೆಚ್ಚುವರಿ ದರ ಏರಿಕೆಗೆ ಕೆಇಆರ್‌ಸಿ ಚಿಂತನೆ ನಡೆಸಿದ್ದು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ 2026ರ ಎಪ್ರಿಲ್ 1ರಿಂದ ಪರಿಷ್ಕೃತ ವಿದ್ಯುತ್ ದರ ಪ್ರಕಟವಾಗುವ ಸಾಧ್ಯತೆಯಿದೆ.
ಕೆಇಆರ್‌ಸಿ ಗೆ ರಾಜ್ಯದ ಐದು ಎಸ್ಕಾಂಗಳು ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ, 2026-27ನೇ ಸಾಲಿಗೆ ಸರಾಸರಿ 64 ಪೈಸೆಯಷ್ಟು ದರ ಏರಿಕೆ ಮಾಡಲು ಕೋರಲಾಗಿದೆ. ಆದರೆ ಕೆಲವು ವರ್ಗಗಳಲ್ಲಿ ಇದು 67ರಿಂದ 99 ಪೈಸೆಗಳ ವರೆಗೆ ಏರಿಕೆಯಾಗಬಹುದು ಎಂದು ಸೂಚನೆಗಳಿವೆ. ದಿನಬಳಕೆ ವಿದ್ಯುತ್ ಬಳಕೆಯಲ್ಲಿ ಸ್ವಲ್ಪ ಏರಿಕೆಯಾಗಬಹುದು. ಕೈಗಾರಿಕಾ ಮತ್ತು ವಾಣಿಜ್ಯ ವಲಯದಲ್ಲಿ ಬಳಸುವ ವಿದ್ಯುತ್ ದರದಲ್ಲೂ ಹೆಚ್ಚಳ ಸಾಧ್ಯತೆ ಇದೆ.
ವಿದ್ಯುತ್ ಸರಬರಾಜು ಕಂಪೆನಿಗಳು ಆದಾಯ ಕೊರತೆ ಎದುರಿಸುತ್ತಿವೆ. ರಾಜ್ಯದ ಎಲ್ಲ ಎಸ್ಕಾಂಗಳು ಸೇರಿ ಅಂದಾಜು 4,500ಕೋಟಿ ರೂ. ನಷ್ಟದಲ್ಲಿವೆ. ಇದರಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಒಂದರಲ್ಲೇ 2024-25ನೇ ಸಾಲಿನಲ್ಲಿ ಬರೋಬ್ಬರಿ 2,800ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಗಳು ದರ ಏರಿಕೆಗೆ ಪಟ್ಟು ಹಿಡಿದಿವೆ ಎನ್ನಲಾಗಿದೆ.
ಆಕ್ಷೇಪಣೆಗೆ ಆಹ್ವಾನ: ಬೆಸ್ಕಾಂ ಸಹಿತ ರಾಜ್ಯದ ವಿವಿಧ ಎಸ್ಕಾಂಗಳು 2024-25ನೆ ಸಾಲಿನ ತಮ್ಮ ಕಾರ್ಯನಿರ್ವಹಣಾ ವರದಿಯನ್ನು ಮತ್ತು ದರ ಏರಿಕೆಯ ಪ್ರಸ್ತಾವನೆಯನ್ನು ಕೆಇಆರ್‍ಸಿಗೆ ಸಲ್ಲಿಸಿವೆ. ವರದಿ ಬೆನ್ನಲ್ಲೇ ಆಯೋಗವು ಸಾರ್ವಜನಿಕರ ಅಹವಾಲು ಆಲಿಸಲು ಮುಂದಾಗಿದೆ. ಈಗಾಗಲೇ ಫೆ.16ರಿಂದ ಫೆಬ್ರವರಿ 27ರ ವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಕೆಇಆರ್‍ಸಿ ಸಾರ್ವಜನಿಕ ವಿಚಾರಣಾ ಸಭೆಗಳನ್ನು ನಡೆಸಲಿದೆ.