×
Ad

ಆಯುರ್ವೇದ, ಯುನಾನಿ, ಹೋಮಿಯೋಪತಿ ಕೋರ್ಸ್‍ಗಳ ಶುಲ್ಕ ಪ್ರಕಟ

Update: 2025-08-03 20:39 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ರಾಜ್ಯ ಸರಕಾರವು 2025-26ನೇ ಶೈಕ್ಷಣಿಕ ಸಾಲಿಗೆ ಸರಕಾರಿ, ಅನುದಾನಿತ ಮತ್ತು ಖಾಸಗಿ ಆಯುರ್ವೇದ, ಯುನಾನಿ, ಹೋಮಿಯೋಪತಿ ಹಾಗೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದ್ಧತಿಯ ವೈದ್ಯಕೀಯ ಮಹಾವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳ ಶುಲ್ಕವನ್ನು ಪ್ರಕಟ ಮಾಡಿದೆ.

ಹಿಂದಿನ ಶೈಕ್ಷಣಿಕ ಸಾಲಿಗೆ ನಿಗದಿಪಡಿಸಿದ ಸೀಟು ಹಂಚಿಕೆಯ ಅನುಪಾತ ಮತ್ತು ಶುಲ್ಕವನ್ನೇ 2025-26ನೇ ಸಾಲಿಗೆ ಯಥಾವತ್ತಾಗಿ ಮುಂದುವರೆಸಬೇಕು. ಖಾಸಗಿ ಆಡಳಿತ ಮಂಡಳಿಯವರು ಸರಕಾರ ನಿಗದಿಪಡಿಸಿದ ಗರಿಷ್ಠ ವಾರ್ಷಿಕ ಶುಲ್ಕದ ಮೊತ್ತಕ್ಕಿಂತ ಹೆಚ್ಚಿಗೆ ಪಡೆಯುವಂತಿಲ್ಲ ಆದೇಶಿಸಿದೆ.

ಪದವಿ ಕೋರ್ಸ್‍ಗಳ ಆಲ್ ಇಂಡಿಯಾ ಕೋಟಾದಲ್ಲಿ 2,25,000 ರೂ.ಗಳ ಶುಲ್ಕವನ್ನು ನಿಗಧಿಪಡಿಸಿದ್ದು, ಶೇ.15ರಷ್ಟು ಸೀಟುಗಳನ್ನು ಮೀಸಲಿಡಬೇಕು. ಮ್ಯಾನೇಜ್‍ಮೆಂಟ್ ಮತ್ತು ಎನ್‍ಐಆರ್ ಕೋಟಾದಲ್ಲಿ 2,50,000 ರೂ.ಗಳ ಶುಲ್ಕವನ್ನು ನಿಗದಿ ಮಾಡಲಾಗಿದೆ.

ಸ್ನಾತಕೋತ್ತರ ಕೋರ್ಸ್‍ಗಳ ಆಲ್ ಇಂಡಿಯಾ ಕೋಟಾದಲ್ಲಿ 2,50,000 ರೂ.ಗಳ ಶುಲ್ಕವನ್ನು ನಿಗದಿಪಡಿಸಿದ್ದು, ಶೇ.15ರಷ್ಟು ಸೀಟುಗಳನ್ನು ಮೀಸಲಿಡಬೇಕು. ಮ್ಯಾನೇಜ್‍ಮೆಂಟ್ ಮತ್ತು ಎನ್‍ಐಆರ್ ಕೋಟಾದಲ್ಲಿ 2,75,000 ರೂ.ಗಳ ಶುಲ್ಕವನ್ನು ನಿಗದಿ ಮಾಡಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್(ಎನ್‍ಸಿಐಎಸ್‍ಎಂ) ಹಾಗೂ ಹೋಮಿಯೋಪತಿ ರಾಷ್ಟ್ರೀಯ ಆಯೋಗ(ಎನ್‍ಸಿಎಚ್) ಹೊರಡಿಸಿರುವ ಮಾರ್ಗಸೂಚಿ ಹಾಗೂ ವೇಳಾಪಟ್ಟಿಗೆ ಅನುಸಾರ ಕೌನ್ಸಿಲಿಂಗ್ ನಡೆಸಬೇಕು ಎಂದು ಸೂಚನೆ ನೀಡಿದೆ.

ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಕೋರ್ಸುಗಳಿಗೆ ಸಂಬಂಧಿಸಿದಂತೆ ಎನ್‍ಐಆರ್ ಕೋಟಾ ಸೀಟುಗಳನ್ನು ಎನ್‍ಆರ್‌ಐ ಅಭ್ಯರ್ಥಿಗಳಿಗೆ ಎರಡು ಸುತ್ತಿನ ಕೌನ್ಸೆಲಿಂಗ್ ನಡೆಸಿದ ನಂತರ, ಉಳಿಕೆ ಸೀಟುಗಳನ್ನು ಅದೇ ಎನ್‍ಐಆರ್ ಶುಲ್ಕದಲ್ಲೇ ಆಡಳಿತ ಮಂಡಳಿ ಕೋಟಾದಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ಹಂಚಿಕೆ ಮಾಡಬೇಕು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯಗಳಿಗೆ ಶೇ.20ರಷ್ಟು ಆಡಳಿತ ಮಂಡಳಿಯ ಕೋಟಾ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 2ನೇ ಸುತ್ತಿನ ಕೌನ್ಸೆಲಿಂಗ್ ಬಳಿಕ ಉಳಿಕೆ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಡಳಿತ ಮಂಡಳಿಗಳಿಗೆ ಬಿಟ್ಟುಕೊಡಬೇಕು ಎಂದು ತಿಳಿಸಿದೆ.

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯಗಳ ಪದವಿ ಕೋರ್ಸ್‍ನ ಶೇ.60ರಷ್ಟು ಮತ್ತು ಸ್ನಾತಕೋತ್ತರ ಕೋರ್ಸ್‍ನ ಶೇ.75ರಷ್ಟು ಎನ್‍ಆರ್‌ಐ ಮತ್ತು ಆಡಳಿತ ಮಂಡಳಿ ಕೋಟಾ ಸೀಟುಗಳನ್ನು ಆಡಳಿತ ಮಂಡಳಿಗಳೇ ಭರ್ತಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News