ಸಿಎಂ ಸ್ಥಾನ ಡಿ.ಕೆ.ಶಿವಕುಮಾರ್‌ಗೆ ಹಸ್ತಾಂತರಿಸಿ : ಎಚ್.ವಿಶ್ವನಾಥ್
ಡಿ.ಕೆ.ಶಿವಕುಮಾರ್/ಎಚ್.ವಿಶ್ವನಾಥ್
ಬೆಂಗಳೂರು : ಸರಕಾರ ರಚನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರ ನಡುವೆ ತಲಾ 30 ತಿಂಗಳು ಅಧಿಕಾರದ ಹಂಚಿಕೆ ಒಡಂಬಡಿಕೆ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಸಿದ್ದರಾಮಯ್ಯ ಮಾತಿನಂತೆ ಮುಖ್ಯಮಂತ್ರಿ ಅಧಿಕಾರವನ್ನು ಡಿ.ಕೆ.ಶಿವಕುಮಾರ್‌ಗೆ ಹಸ್ತಾಂತರ ಮಾಡಬೇಕು ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 136 ಸ್ಥಾನಗಳೊಂದಿಗೆ ಸುಭದ್ರ ಸರಕಾರವನ್ನು ರಚಿಸಲಾಗಿದೆ. ಇದಕ್ಕೆ ಒಂದು ಜಾತಿ, ಒಂದು ಧರ್ಮ ಕಾರಣವಲ್ಲ. ನಾಡಿನ ಎಲ್ಲ ಜಾತಿ, ಜನಾಂಗ, ಧರ್ಮ, ಭಾಷಿಕರ ಸಹಯೋಗ ಮತ್ತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ನಿಷ್ಠಾವಂತ ಕಾಂಗ್ರೆಸ್ಸಿಗರ ಶ್ರಮವೂ ಇದೆ ಎಂದರು.
ನಿಮ್ಮಿಬ್ಬರ ನಡುವೆ ಚರ್ಚೆ ಬಿರುಸಾಗಿ ಕೊನೆಗೆ ನಿಮ್ಮಬ್ಬರಲ್ಲೇ ಸಮಾಧಾನ ಮಾಡಿಕೊಂಡು, ನೀವಿಬ್ಬರೂ ಸೇರಿ ತೆಗೆದುಕೊಂಡ ತೀರ್ಮಾನ 50:50 ಅನುಪಾತ ಅಲ್ಲವೇ? ನೀವಿಬ್ಬರೂ ಪರಸ್ಪರ ಒಪ್ಪಿ ನೀವು ಡಿ.ಕೆ.ಶಿವಕುಮಾರ್ ತಲೆಯ ಮೇಲೆ ನಿಮ್ಮ ಬಲಗೈ ಇಟ್ಟು 30 ತಿಂಗಳ ನಂತರ ನಿನಿಗೆ ಅಧಿಕಾರ ಹಸ್ತಾಂತರ ಮಾಡುತ್ತೇನೆಂಬ ನೀವು ಕೊಟ್ಟ ವಚನ ಸತ್ಯೆವಲ್ಲವೇ?. ಇಷ್ಟೆಲ್ಲಾ ನಡೆದಿದ್ದರೂ ಮತ್ಯಾಕೆ ಉಳಿದ 2.5 ವರ್ಷಗಳ ಅವಧಿಗೆ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆಂದು ತಮ್ಮ ಸಂಪುಟದ ಕೆಲವು ಸಹದ್ಯೋಗಿಗಳ ಮೂಲಕ ಹೇಳಿಕೆ ಕೊಡಿಸುತ್ತಿದ್ದೀರಿ ಎಂದು ವಿಶ್ವನಾಥ್ ಪ್ರಶ್ನಿಸಿದರು.
ರಾಜಕಾರಣದಲ್ಲಿ ವಚನ ಭ್ರಷ್ಟರಾಗುವುದು ತಾಯಿಗೆ ಮಾಡಿದ ದ್ರೋಹದಂತೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನಡುವಿನ ವಚನವನ್ನು ಜೆಡಿಎಸ್ ಪಕ್ಷ ಭ್ರಷ್ಟವನ್ನಾಗಿಸಿದ ನಂತರ, ಬಿಜೆಪಿ ಅಧಿಕಾರಕ್ಕೆ ಬಂದ ರಾಜಕೀಯ ತಿರುವಿನ ಸತ್ಯ ಜನರ ಮುಂದಿಲ್ಲವೇ? ಈಗಲೂ ಅಷ್ಟೇ. ಸಿದ್ದರಾಮಯ್ಯನವರೇ ನಿಮ್ಮ ಸ್ವಾರ್ಥಕ್ಕೆ ನೀವು ವಚನ ಭ್ರಷ್ಟರಾದರೆ, ಮುಂದೆ ನಾಡಿನ ಆಡಳಿತ ಬಿಜೆಪಿಯ ಪರ ಎನ್ನುವುದುನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಅವರು ಎಚ್ಚರಿಕೆ ನೀಡಿದರು.
ನೀವು ಹಿಂದುಳಿದ ಕುರುಬ ಸಮಾಜದವರು. ಕುರುಬರು ಮಾತಿಗೆ ತಪ್ಪದವರು ಎಂಬ ನಂಬಿಕೆ ಇನ್ನೂ ಜನ ಮಾನಸದಲ್ಲಿ ಜೀವಂತವಾಗಿದೆ. ಯಾವುದಾರೂ ವೃತ್ತಿ, ವ್ಯಾಪಾರ ಆರಂಭಿಸುವಾಗ ಮತ್ತು ಚುನಾವಣೆ ಸಂದರ್ಭಗಳಲ್ಲಿ ಮೊದಲು ಕುರುಬರಿಂದ ಬೋಣಿಯಾಗಲಿ ಎಂದು ನಂಬಿಕೆ ಇಟ್ಟು ಮಾಡಿಸುತ್ತಾರೆ. ಅಂತಹ ನಂಬಿಕೆಯನ್ನು ನಿಮ್ಮ ನಡವಳಿಕೆ ಹುಸಿಯಾಗಿಸುತ್ತದೆ. ಇಡೀ ಸಮಾಜದ ಮೇಲೆ ಇದರ ದುಷ್ಪರಿಣಾಮ ಬೀರಲು ನೀವು ಕಾರಣವಾಗುತ್ತೀರಿ ಎಂಬುದನ್ನು ಮರೆಯಬೇಡಿ ಎಂದು ಅವರು ಹೇಳಿದರು.
ಕನಕದಾಸರ ಕರ್ಮಭೂಮಿ ಕಾಗಿನೆಲೆಯಲ್ಲಿ ಸ್ಥಾಪಿತವಾಗಿರುವ ನಂಬಿಕೆಯ ಪುಣ್ಯಕ್ಷೇತ್ರ ಕಾಗಿನೆಲೆ ಸಂಸ್ಥಾನ ಕನಕಗುರು ಪೀಠವನ್ನು ನೀವು ಅವಮಾನಿಸಿದಂತಾಗುತ್ತದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ ಎಂದು ನೀವೇ ಎಷ್ಟೋ ಬಾರಿ ನಿಮ್ಮ ಭಾಷಣದಲ್ಲಿ ಹೇಳಿದ್ದೀರಿ. ಕುರುಬ ಸಮಾಜವನ್ನು ಗೌರವಿಸುವ ಇತರೇ ಸಮಾಜಗಳ ನಂಬಿಕೆಯನ್ನು ಹುಸಿ ಮಾಡುವುದರ ಮೂಲಕ ಹಿಂದುಳಿದ ಕುರುಬ ಸಮಾಜದ ಯುವಕರ, ಕನಕದಾಸರ ಭಕ್ತರ, ಹಿರಿಯರ ಭವಿಷ್ಯಕ್ಕೆ, ಗೌರವಕ್ಕೆ ಚ್ಯುತಿ ತರಬೇಡಿ ಎಂದು ವಿಶ್ವನಾಥ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರದೇಶ ಕುರುಬ ಸಂಘದ ನಿರ್ದೇಶಕರಾದ ರಾಜೇಶ್ವರಿ, ಜೈಲಿಂಗೇಗೌಡ ಉಪಸ್ಥಿತರಿದ್ದರು.