×
Ad

"ಹರೀಶ್ ಪೂಂಜಾ ಒಬ್ಬ ಹ್ಯಾಬಿಚ್ಯುವಲ್ ಅಫೆಂಡರ್": ಹೈಕೋರ್ಟ್ ಮುಂದೆ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಬಾಲನ್

Update: 2025-05-20 16:05 IST

ಹರೀಶ್ ಪೂಂಜಾ / ಎಸ್. ಬಾಲನ್

ಬೆಂಗಳೂರು: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಇಂದು ವಿಚಾರಣೆಗೆ ಬಂದಿದ್ದು, ದೂರುದಾರ ಎಸ್ ಬಿ ಇಬ್ರಾಹಿಂ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್ ಬಾಲನ್ ಅವರು ಹೈಕೋರ್ಟ್ ಗೆ ಪ್ರಕರಣದ ವಿವರ ನೀಡಿದರು.

"144 ಸೆಕ್ಷನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಕೋಮುಗಲಭೆ ಹುಟ್ಟುಹಾಕಬೇಕು ಎಂಬ ಕಾರಣಕ್ಕಾಗಿಯೇ ಶಾಸಕ ಹರೀಶ್ ಪೂಂಜಾ ತೆಕ್ಕಾರಿನಲ್ಲಿ ಕೋಮುದ್ವೇಷದ ಭಾಷಣ ಮಾಡಿದ್ದಾರೆ. ಹಾಗಾಗಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನನಗೆ ಬಂದಿರುವ ಮಾಹಿತಿಯ ಪ್ರಕಾರ, ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಕೂಡಾ ಸಿದ್ದಪಡಿಸಿಕೊಂಡಿದ್ದಾರೆ" ಎಂದು ಎಸ್ ಬಾಲನ್ ವಾದ ಮಂಡಿಸಿದರು.

"ಹರೀಶ್ ಪೂಂಜಾ ಒರ್ವ ಹ್ಯಾಬಿಚ್ಯುವಲ್ ಅಫೆಂಡರ್. ಆತ ಒರ್ವ ಪುನರಾವರ್ತಿತ ಆರೋಪಿ. ಶಾಸಕಾಂಗಕ್ಕೆ ಅನರ್ಹವಾಗಿರುವ ವ್ಯಕ್ತಿಯಾಗಿದ್ದಾರೆ. ಹರೀಶ್ ಪೂಂಜಾ ವಿರುದ್ದ ಇದಲ್ಲದೇ ಏಳು ಎಫ್ಐಆರ್ ದಾಖಲಾಗಿದೆ. ಏಳೂ ಎಫ್ಐಆರ್ ಗಳೂ ಪುನರಾವರ್ತಿತ ಆಪರಾಧವೇ ಆಗಿದೆ. ಎಲ್ಲಾ ಎಫ್ಐಆರ್ ಗಳಲ್ಲೂ ಜಾಮೀನು ತೆಗೆದುಕೊಂಡಿದ್ದಾರೆ. ಅಪರಾಧವನ್ನು ಪುನರಾವರ್ತಿಸಬಾರದು ಎಂಬ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ" ಎಂದು ಬಾಲನ್ ವಾದಿಸಿದರು.

"ಓರ್ವ ಶಾಸಕನಾಗಿ ಕಾರ್ಯಾಂಗ, ನ್ಯಾಯಾಂಗಕ್ಕೆ ಪೂರಕವಾಗಿ ಬದುಕಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಹರೀಶ್ ಪೂಂಜಾ ಶಿಕ್ಷೆಗೆ ಅರ್ಹವಾದ ವ್ಯಕ್ತಿಯಾಗಿದ್ದಾರೆ. ಹಾಗಾಗಿಯೇ ಕಾರ್ಯಾಂಗದ 144 ಸೆಕ್ಷನ್ ಅನ್ನು ಉಲ್ಲಂಘಿಸುತ್ತಾರೆ. ನೂರು ಕೇಸ್ ಹಾಕಿದರೂ ಹೈಕೋರ್ಟ್ ಅನ್ನೂ ನಾನು ಕೇರ್ ಮಾಡಲ್ಲ ಎಂದು ನ್ಯಾಯಾಂಗವನ್ನೇ ದುರಹಂಕಾರದಿಂದ ಉಲ್ಲೇಖಿಸುತ್ತಾರೆ. ಹಾಗಾಗಿ ಹರೀಶ್ ಪೂಂಜಾಗೆ ನಾಗರಿಕರಿಗೆ ನೀಡುವ ಯಾವ ಕರುಣೆಯನ್ನೂ ನ್ಯಾಯಾಂಗ ನೀಡುವ ಅಗತ್ಯ ಇಲ್ಲ" ಎಂದು ಬಾಲನ್ ವಾದಿಸಿದ್ದಾರೆ.

ಹರೀಶ್ ಪೂಂಜಾ ಭಾಷಣ ಮಾಡಿದ ತೆಕ್ಕಾರು ದೇವಸ್ಥಾನದ ವೇದಿಕೆಯೇ ಮುಸ್ಲಿಮರ ಜಮೀನಲ್ಲಿ ನಿರ್ಮಾಣವಾಗಿತ್ತು. ತೆಕ್ಕಾರಿನಲ್ಲಿ ಹಿಂದೂ ಮುಸ್ಲೀಮರು ಬಹಳ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ದೇವಸ್ಥಾನದ ಬ್ರಹ್ಮಕಲಶೋತ್ಸವ, ಜಾತ್ರೆಗಳನ್ನು ತಮ್ಮದೇ ಮನೆಯ ಹಬ್ಬವೆಂಬಂತೆ ಸಂಭ್ರಮಿಸಿದ್ದಾರೆ. ಇಂತಹ ಸೌಹಾರ್ದತೆಯನ್ನು ರಕ್ಷಿಸುವ ಸಾಂವಿಧಾನಿಕ ಕರ್ತವ್ಯ ಹೊಂದಿರುವ ಶಾಸಕನೊಬ್ಬ ಅದನ್ನು ಹಾಳುಗೆಡವಲು ಯತ್ನಿಸುತ್ತಾನೆ ಎನ್ನುವುದು ದುರಂತ. ಹಾಗಾಗಿ ಎಫ್ಐಆರ್ ಅಥವಾ ಚಾರ್ಜ್ ಶೀಟ್ ರದ್ದತಿಯ ಅರ್ಜಿಯ ವಿಚಾರಣೆಯನ್ನೇ ನಡೆಸದೇ ವಜಾಗೊಳಿಸಬೇಕು ಎಂದು ಬಾಲನ್ ವಾದಿಸಿದರು.

ಚಾರ್ಜ್ ಶೀಟ್ ಈಗಾಗಲೇ ಸಲ್ಲಿಸಲಾಗಿದ್ದು, ಎಫ್ಐಆರ್ ರದ್ದತಿಗೆ ಕೋರಿದ ಅರ್ಜಿಯೇ ಮಾನ್ಯತೆ ಕಳೆದುಕೊಂಡಿದೆ. ಪೊಲೀಸರು ಮತ್ತು ಸರ್ಕಾರ ಸರಿಯಾದ ರೀತಿಯ ಕ್ರಮ ಕೈಗೊಂಡಿದೆ. ದ್ವೇಷ ಭಾಷಣಗಳು ಗಲಭೆಯನ್ನು ಸೃಷ್ಟಿಸುತ್ತಿದೆ. ಹಾಗಾಗಿ ಅರ್ಜಿಯನ್ನೇ ತಿರಸ್ಕೃತಗೊಳಿಸಬೇಕು ಎಂದು ಅಡಿಷನಲ್ ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಜಗದೀಶ್ ವಾದಿಸಿದರು.

ವಾದ ಆಲಿಸಿದ ನ್ಯಾಯಮೂರ್ತಿ ಆರ್ ರಾಚಯ್ಯ ಅವರು ಅರ್ಜಿಯನ್ನು ಪರಿಷ್ಕರಿಸುವಂತೆ ದೂರುದಾರರಿಗೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಮೇ 22 ಕ್ಕೆ ಮುಂದೂಡಿದರು.

ಅರ್ಜಿದಾರರ ಪರವಾಗಿ ಪ್ರಸನ್ನ ದೇಶಪಾಂಡೆ, ದೂರುದಾರರ ಪರವಾಗಿ ಹಿರಿಯ ವಕೀಲ ಎಸ್ ಬಾಲನ್, ವಕೀಲೆ ರಕ್ಷಿತಾ ಸಿಂಗ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News