×
Ad

ಹಾವೇರಿ: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಗ್ರಾ.ಪಂ. ಅಧ್ಯಕ್ಷೆಯಾಗಿದ್ದ ಮಹಿಳೆಗೆ 7 ವರ್ಷ ಜೈಲು ಶಿಕ್ಷೆ

Update: 2023-08-21 13:03 IST

ಸಾಂದರ್ಭಿಕ ಚಿತ್ರ

ಹಾವೇರಿ: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಗ್ರಾ.ಪಂ. ಅಧ್ಯಕ್ಷ ಸ್ಥಾನ ಮತ್ತು ಸದಸ್ಯ ಸ್ಥಾನ ಅನುಭವಿಸಿದ್ದ ಮಹಿಳೆಗೆ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 19 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. 

ಶಿಗ್ಗಾವಿ ತಾಲೂಕು ವನಹಳ್ಳಿ ಗ್ರಾಮದ ಲಕ್ಷ್ಮೀ ಮಾರುತಿ ಕಬ್ಬೇರ ಅವರೇ  ಶಿಕ್ಷೆಗೆ ಒಳಗಾದ ಮಹಿಳೆ.

ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣ ಈ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಸರೋಜಾ ಜಿ.ಕೂಲಗಿಮಠ ಅವರು ವಾದ ಮಂಡಿಸಿದ್ದರು.

ಲಕ್ಷ್ಮೀ ಕಬ್ಬೇರ ಅವರು ಹಿಂದೂ ಗಂಗಾಮತ (ಪ್ರವರ್ಗ-1)ಕ್ಕೆ ಸೇರಿದ್ದರೂ, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಸುಳ್ಳು ಅಫಿಡವಿಟ್‌ ಘೋಷಣಾ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿ, 4 ಜೂನ್ 2015ರಂದು ಶಿಗ್ಗಾವಿ ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಿ, ಹಿಂದೂ ಗಂಟಿಚೋರ್ಸ್ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದರು. ನಂತರ ಹನುಮರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿ, ನಂತರ ಎಸ್.ಸಿ ಸ್ಥಾನಕ್ಕೆ ಮೀಸಲಾಗಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

ಈ ಕುರಿತಂತೆ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ದಾವಣಗೆರೆ ಡಿಸಿಆರ್‌ಒ ಪೊಲೀಸ್ ಇನ್‌ಸ್ಪೆಕ್ಟರ್‌ ಟಿ.ಜಿ. ಶ್ರೀಧರ ಶಾಸ್ತ್ರೀ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News