ಸರಕಾರಿ ಗೋಮಾಳ ಕಬಳಿಕೆ ಆರೋಪ | ಶಾಸಕ ಎಚ್.ಸಿ.ಬಾಲಕೃಷ್ಣ ಸಹಿತ 22 ಮಂದಿ ವಿರುದ್ಧ ದೂರು ದಾಖಲು
ಎಚ್.ಸಿ.ಬಾಲಕೃಷ್ಣ
ಬೆಂಗಳೂರು : ಸುಮಾರು 800 ಕೋಟಿ ರೂ. ಮೌಲ್ಯದ ಸರಕಾರಿ ಗೋಮಾಳ ಜಮೀನು ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಶಾಸಕ ಎಚ್.ಸಿ.ಬಾಲಕೃಷ್ಣ ಸಹಿತ ಒಟ್ಟು 22 ಮಂದಿ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ಗುರುವಾರ ದೂರು ನೀಡಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಸರ್ವೇ ನಂಬರ್ 233, 234, 235 ಮತ್ತು 236ರಲ್ಲಿ ಒಟ್ಟು 165 ಕೋಟಿ ರೂ. ಮೌಲ್ಯದ 26 ಎಕರೆ ಗೋಮಾಳ ಜಮೀನು ಕಬಳಿಕೆ ಆರೋಪ ಕೇಳಿಬಂದಿದ್ದು, ಈ ಪೈಕಿ 54 ಕೋಟಿ ರೂ. ಮೌಲ್ಯದ 8 ಎಕರೆ ಜಮೀನು ಶಾಸಕ ಎಚ್.ಸಿ.ಬಾಲಕೃಷ್ಣ ಅವರು ತಮ್ಮ ಪತ್ನಿ ರಾಧಾ ಬಾಲಕೃಷ್ಣ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಎನ್.ಆರ್ ರಮೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಮೂರನೇ ವ್ಯಕ್ತಿಗೆ ಮಂಜೂರು ಮಾಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ತಮ್ಮ ಪತ್ನಿ ಹೆಸರಿಗೆ ಮಾಡಿಕೊಂಡಿದ್ದಾರೆ. 2025ರ ಎಪ್ರಿಲ್ 3ರಂದು ಕೆಂಗೇರಿ ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲೇನಿದೆ?: ಯಶವಂತಪುರ ಕ್ಷೇತ್ರದ ವ್ಯಾಪ್ತಿಯ ಬೆಂಗಳೂರು ದಕ್ಷಿಣ ತಾಲೂಕು, ತಾವರೆಕೆರೆ ಹೋಬಳಿ, ಕುರುಬರಹಳ್ಳಿ ಗ್ರಾಮದ ಸರ್ವೆ ನಂ.158ರಲ್ಲಿ ಒಟ್ಟು 130.29 ಎಕರೆ ವಿಸ್ತೀರ್ಣದ ಸ್ವತ್ತು ಸಂಪೂರ್ಣವಾಗಿ ಸರಕಾರಿ ಗೋಮಾಳ ಪ್ರದೇಶವಾಗಿದೆ. ಪ್ರಸ್ತುತ ಕುರುಬರಹಳ್ಳಿ ಗ್ರಾಮದ ಪ್ರತೀ ಎಕರೆ ಜಮೀನಿಗೆ ಕನಿಷ್ಟ ಆರು ಕೋಟಿ ರೂ. ಗಳಿಗೂ ಅಧಿಕವಿದ್ದು, ಒಟ್ಟಾರೆ 130.29 ಎಕರೆ ವಿಸ್ತೀರ್ಣದ ಜಮೀನಿನ ಮಾರುಕಟ್ಟೆ ಬೆಲೆ ಸುಮಾರು 800 ಕೋಟಿ ರೂ. ಗಳಿಗೂ ಅಧಿಕವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಈ ಸರಕಾರಿ ಗೋಮಾಳದ ಸ್ವತ್ತಿನಲ್ಲಿ ಸ್ವಲ್ಪ ಸ್ವಲ್ಪವೇ ಪ್ರಮಾಣದಲ್ಲಿ ಕಬಳಿಸುವ ಕಾನೂನು ಬಾಹಿರ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ. ಇಂತಹ ಪ್ರಭಾವಿಗಳ ಒತ್ತಡಗಳಿಂದಾಗಿ ಕುರುಬರಹಳ್ಳಿ ಗ್ರಾಮದ ಸರ್ವೆ ನಂ. 158ಕ್ಕೆ ಹೊಸದಾಗಿ ಸರ್ವೆ ನಂ.233, 234, 235 ಮತ್ತು 236 ಎಂದು ಪೋಡಿ ಮಾಡಿ ಬದಲಾಯಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಸ್ತುತ ಬೆಂಗಳೂರು ದಕ್ಷಿಣ ತಾಲೂಕಿನ ವ್ಯಾಪ್ತಿಗೆ ಒಳಪಟ್ಟಿರುವ ತಾವರೆಕೆರೆ ಹೋಬಳಿಯು ಈ ಮೊದಲು ಮಾಗಡಿ ತಾಲೂಕು ಕಚೇರಿಯ ವ್ಯಾಪ್ತಿಗೆ ಒಳಪಟ್ಟಿತ್ತು. ಮಾಗಡಿ ತಾಲೂಕು ಕಚೇರಿಯಲ್ಲಿದ್ದ ಬಹುತೇಕ ದಾಖಲೆಗಳನ್ನು ತಿದ್ದಿಸುವಂತಹ ಕಾನೂನು ಬಾಹಿರ ಕಾರ್ಯಗಳನ್ನು, ಆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ, ನೌಕರರ ಮೂಲಕ ಪ್ರಭಾವಿ ರಾಜಕಾರಣಿಗಳು ಮಾಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.