×
Ad

ಕಾಂಗ್ರೆಸ್ ಸರಕಾರ ಆತುರಾತುರವಾಗಿ ಜಾತಿಗಣತಿ ಮಾಡುತ್ತಿದೆ : ಎಚ್.ಡಿ.ಕುಮಾರಸ್ವಾಮಿ

"ಈ ವರದಿ ಕಾಂತರಾಜ್ ವರದಿಗಿಂತಲೂ ಕೆಟ್ಟದಾಗಿರುತ್ತದೆ"

Update: 2025-09-20 17:16 IST

ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಆತುರಾತುರವಾಗಿ ಜಾತಿ ಗಣತಿ ಮಾಡುತ್ತಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಇದರ ಪ್ರತಿಫಲವನ್ನು ಕಾಂಗ್ರೆಸ್ ಪಕ್ಷ ಅನುಭವಿಸಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ಸಮೀಕ್ಷೆ ಕುರಿತ ಒಕ್ಕಲಿಗ ಸಮುದಾಯದ ಜಾಗೃತಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಸಭೆಯಲ್ಲಿ ಎಲ್ಲಾ ಸಾಧಕ -ಬಾಧಕಗಳ ಬಗ್ಗೆ ಚರ್ಚೆ ಮಾಡೆಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಸಮಸ್ಯೆ ಬಗೆಹರಿಸುವ ಬಗ್ಗೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಹೇಳಿದರು.

ಈಗಾಗಲೇ ಕಾಂತರಾಜ್ ಆಯೋಗ, ಜಯಪ್ರಕಾಶ್ ಹೆಗಡೆ ಆಯೋಗ ಆಯಿತು. ಈಗ ಮೂರನೇ ಆಯೋಗ ರಚನೆ ಆಗಿದೆ. ಈ ರೀತಿಯ ಆಯೋಗ ರಚನೆ ಮಾಡಬೇಕಾದರೆ ಏನೆಲ್ಲಾ ಮಾನದಂಡಗಳನ್ನು ಅನುಸರಿಸಿದ್ದಾರೆ ಎನ್ನುವುದನ್ನು ಎಂಬುದನ್ನು ನೋಡಬೇಕು. ಸುಮ್ಮ ಸುಮ್ಮನೆ ಆಯೋಗ ರಚನೆ ಮಾಡಲು ಸಾಧ್ಯವಿಲ್ಲ. ಸಮೀಕ್ಷೆಗೆ 15 ದಿನಗಳ ಅವಕಾಶ ಕೊಟ್ಟಿದ್ದಾರೆ. ಅದರಲ್ಲಿ 9 ದಿನ ನವರಾತ್ರಿ ಬರುತ್ತದೆ, ಉಳಿದ 6 ದಿನಗಳಲ್ಲಿ ಆಯೋಗ ಏನು ವರದಿ ಕೊಡಲು ಸಾಧ್ಯ? ಹಾಗಾದರೆ ಇವರು ಕಾಂತರಾಜ್ ವರದಿಯನ್ನೇ ಭಟ್ಟಿ ಇಳಿಸುತ್ತಾರ? ಇಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಮಾಡಿದ್ದೇವೆ. ಸರಕಾರದಿಂದ ಸಮೀಕ್ಷೆಯಲ್ಲಿ ಅನ್ಯಾಯವಾದರೆ ಸ್ವಾಮೀಜಿಗಳ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪರೇಷದ ಬಗ್ಗೆ ಚರ್ಚೆ ಮಾಡಿದ್ದೇವೆ. ಇದು ಸಣ್ಣ ಮಟ್ಟದ ಸಭೆ ಅಷ್ಟೇ. ಈ ಸರಕಾರ ಬೆಂಕಿ ಹಚ್ಚಲು ಏನ್ ಬೇಕೋ ಅದನ್ನು ಮಾಡಿದೆ. ಇದರ ಪ್ರತಿಪ್ರಲ ಮುಂದೆ ಗೊತ್ತಾಗುತ್ತದೆ. ವಾಸ್ತವಾಂಶದ ಬಗ್ಗೆ ಮಾತ್ರ ಚರ್ಚೆ ಆಗಬೇಕು ಎಂದು ಅವರು ಕಿಡಿಕಾರಿದರು.

ಜಾತಿ ವಿಚಾರದಲ್ಲಿ ಒಕ್ಕಲಿಗರಿಗೆ ದೊಡ್ಡಮಟ್ಟದ ಪೆಟ್ಟು ಬಿದ್ದಿದೆ. ಬೆಂಗಳೂರಿನಲ್ಲಿ ಹೆಚ್ಚು ಭೂಮಿಯನ್ನು ಕಳೆದುಕೊಂಡಿದ್ದು ಒಕ್ಕಲಿಗರ ಸಮಾಜ. ಡಿ.ಕೆ ಶಿವಕುಮಾರ್ ಎಲ್ಲಾ ಸಮಸ್ಯೆ ಬಗೆಹರಿಸಲು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಮುಂದೆ ನೋಡೋಣ, ಏನಾಗುತ್ತದೆ ಅಂತ. ಇದು ಇನ್ನೊಂದು ಕಾಂತರಾಜ್ ವರದಿ ಅಲ್ಲ, ಅದಕ್ಕಿಂತಲೂ ಕೆಟ್ಟದಾಗಿ ಇರುತ್ತದೆ ಎಂದು ದೂರಿದರು.

ರಾಜ್ಯ ಸರಕಾರ ಜಾತಿ ಜನಗಣತಿಯನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ವರದಿ ಕೊಡಬೇಕು ಎಂದು ಮೂರನೇ ಆಯೋಗ ರಚನೆ ಮಾಡಿದೆ. ಮಧುಸೂದನ್ ನಾಯ್ಕ್ ಆಯೋಗ ರಚನೆ ಆಗಿದೆ. ಕೇವಲ ಹದಿನೈದು ದಿನಗಳಲ್ಲಿ ವರದಿ ಕೊಡಬೇಕು ಅಂತೆ. ನಾನು ಏನು ಡೈರೆಕ್ಷನ್ ಕೊಡಲು ಆಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಏನಾದರೂ ಬದಲಾವಣೆ ತರಲು ಪವರ್ ಇಲ್ಲ ಅಂತಾರೆ ಎಂದ ಕುಮಾರಸ್ವಾಮಿ ಅವರು, ನಮ್ಮ ಸಮಾಜದ ಭವಿಷ್ಯಕ್ಕಾಗಿ ಹಾಗೂ ಸಮಾಜಕ್ಕೆ ಆದ ಅನ್ಯಾಯದ ಬಗ್ಗೆ ಧ್ವನಿ ಎತ್ತುವ ಸಲುವಾಗಿ ಸಭೆ ಮಾಡಿದ್ದೇವೆ. ಸ್ವಾಮೀಜಿಗಳ ಸೂಚನೆ ಮೇರೆಗೆ ಇಲ್ಲಿ ಸೇರಿದ್ದೇವೆ ಎಂದರು.

ಕ್ರಿಶ್ಚಿಯನ್ ಒಕ್ಕಲಿಗ ಜಾತಿಯನ್ನು ಹೇಗೆ ತೆಗೆಯುತ್ತಾರೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ಸಮಯದ ಅಭಾವ ಇದೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು, ಈಗ ಏನಿದೆ ಅದನ್ನೇ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬ ಮಂತ್ರಿ ಹೇಳಿದ್ದಾರೆ, ಈಗಿನ ಆಯೋಗ ಉತ್ತಮವಾದ ಆಯೋಗವಂತೆ. ಒಳ್ಳೆಯ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ನಾನು ಆ ಮಂತ್ರಿಯನ್ನು ಕೇಳಲು ಬಯಸುತ್ತೇನೆ, ಇದು ಸತ್ಯದ ಆಯೋಗವೇ? ರಾಜ್ಯ ನೆಮ್ಮದಿಯಾಗಿ ಇದೆ. ಈ ಆಯೋಗ ಬೆಂಕಿ ಹಚ್ಚುವ ಕೆಲಸ ಮಾಡಲು ಹೊರಟಿದೆ. ಸಿದ್ದರಾಮಯ್ಯನವರು ಮುಂಜಾಗ್ರತೆ ಕ್ರಮವಾಗಿ ಯಾವುದೇ ಆಲೋಚನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏರ್ ಪೋರ್ಟ್ ಮಾಡುವುದಕ್ಕೆ 50 ಸಾವಿರ ಎಕರೆ ಭೂಮಿ ಬೇಕು. ಇದಕ್ಕೆ ಯಾವ ಸಮಾಜದ ಜಮೀನು ಜಾಸ್ತಿ ಹೋಗುತ್ತಿದೆ? ಬೇರೆ ಸಮಾಜಗಳ ಜನರ ಭೂಮಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಹೋಗಿರಬಹುದು. ಆದರೆ ಹೆಚ್ಚಿನ ಭೂಮಿ ಕಳೆದುಕೊಂಡಿದ್ದು ಒಕ್ಕಲಿಗರು. ಜಮೀನು ಮಾರಿ ಯಾವುದೋ ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆಲ್ಲ ಏನ್ ಕೊಟ್ಡಿದ್ದಾರೆ? ನನ್ನ ಪ್ರಕಾರ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ನಡೆ ನೋಡಿದರೆ ಇದು ಕಾಂತರಾಜ್ ವರದಿಗಿಂತಲೂ ಕೆಟ್ಟದಾಗಿ ಇರುತ್ತದೆ. ಈ ಬಗ್ಗೆ ಯಾವ ಸಂಶಯವೂ ಬೇಡ ಎಂದು ಅವರು ಕಳವಳ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News