×
Ad

ಬಿಡದಿ ಟೌನ್‍ಶಿಪ್‍ಗಾಗಿ ರೈತರ ಭೂಮಿ ಕಿತ್ತುಕೊಳ್ಳಲು ಬಿಡುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2025-09-28 19:58 IST

ಎಚ್.ಡಿ.ಕುಮಾರಸ್ವಾಮಿ

ಹೊಸದಿಲ್ಲಿ, ಸೆ.28 : ಬಿಡದಿ ಟೌನ್ ಶಿಪ್ ದೇವೇಗೌಡರ ಪುತ್ರನ ಕೂಸು ಎಂದು ಹೇಳಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಡದಿ ಟೌನ್‍ಶಿಪ್‍ಗಾಗಿ ರೈತರ ಒಂದು ಇಂಚು ಭೂಮಿಯನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಗುಡುಗಿದರು.

ಟೌನ್ ಶಿಪ್ ವಿರೋಧಿಸಿ ಬಿಡದಿ ಭಾಗದ ರೈತರು ರವಿವಾರ ನಡೆಸಿದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಹೊಸದಿಲ್ಲಿಯಿಂದಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಬಡವರು, ರೈತರ ಭೂಮಿಯನ್ನು ಲೂಟಿ ಹೊಡೆಯುತ್ತಿರುವ ವ್ಯಕ್ತಿ ನನ್ನ ಬಗ್ಗೆ ಲಘವಾಗಿ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.

ನಾನು ಒಬ್ಬ ರೈತನಾಗಿ ಬಿಡದಿಯಲ್ಲಿ ಜೀವನ ಕಟ್ಟಿಕೊಂಡಿದ್ದೇನೆ. ಆತನಂತೆ ಕೊಳ್ಳೆ ಹೊಡೆದ ಬಡವರ ಭೂಮಿಯಲ್ಲಿ ಶಾಲೆ, ಕಾಲೇಜು, ಮುಗಿಲೆತ್ತರದ ಕಟ್ಟಡಗಳನ್ನು ಸೇರಿ ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಅವರು ಕಿಡಿಕಾರಿದರು.

ಬಿಳ್ಳೆಕೆಂಪನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಎಂಬ ವ್ಯಕ್ತಿ ಕರ್ನಾಟಕ ಹಣಕಾಸು ನಿಗಮದಿಂದ ಸಾಲ ಪಡೆದು ಬೆಂಗಳೂರು-ಮೈಸೂರು ಮುಖ್ಯರಸ್ತೆಯಲ್ಲಿ ಹೋಟೆಲ್ ಮಾಡಿದ್ದರು. ಆ ಜಾಗವನ್ನು ದಬ್ಬಾಳಿಕೆಯಿಂದ ಖಾಲಿ ಮಾಡಿಸಿ, ಪುನಃ ಕಡಿಮೆ ಬೆಲೆಗೆ ಅದೇ ಜಾಗವನ್ನು ಖರೀದಿಸಿ ಅಲ್ಲೇ ಶಾಲಾ ಕಟ್ಟಡ ಕಟ್ಟಿಕೊಂಡಿದ್ದಾರೆ ಎಂದು ಶಿವಕುಮಾರ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದರು.

ರಾಮಸ್ವಾಮಿ ಅಂತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದರು. ಅವರು ತಮ್ಮ ಕಷ್ಟದ ಹಣದಿಂದ ಒಂದಿಷ್ಟು ಜಮೀನು ಖರೀದಿಸಿ ಬದುಕು ಕಟ್ಟಿಕೊಂಡಿದ್ದರು. ಆ ಭೂಮಿಯ ಮೇಲೆ ಡಿಕೆಶಿ ಕಾಕದೃಷ್ಟಿ ಬಿದ್ದಿತು. ಆ ಜಮೀನು ಬಿಟ್ಟುಕೊಡಿ ಎಂದು ಅವರಿಗೆ ಧಮ್ಕಿ ಹಾಕಿದ್ದರು. ಅವರು ಬಿಟ್ಟು ಕೊಡಲಿಲ್ಲ. ಕೊನೆಗೆ ಆ ಸೈನಿಕನ ಮಗಳನ್ನೆ ಅಪಹರಿಸಿ ಆ ಜಮೀನನ್ನು ಬರೆಸಿಕೊಂಡಿದ್ದಾರೆ. ಇಂತಹ ನೀಚ ಕೆಲಸ ನಾವು ಮಾಡಿದ್ದೇವೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಬೆಂಗಳೂರು ಸುತ್ತಮುತ್ತ ನೈಸ್ ರಸ್ತೆ ಇದೆ. ಹೊಸಕೆರೆಹಳ್ಳಿ ಸುತ್ತಮುತ್ತ ಸಾರ್ವಜನಿಕರಿಂದ ಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನೂ ಡಿಕೆಶಿ ಕಬಳಿಸಿದ್ದಾರೆ. ಜತೆಗೆ, ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಇದೇ ಶಿವಕುಮಾರ್ ಸಚಿವರಾಗಿದ್ದರು. ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್ ರಸ್ತೆ ಮಾಡುತ್ತೇವೆ ಎಂದು ಹೇಳಿ ಭಾರೀ ಪ್ರಮಾಣದಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡರು ಎಂದು ಅವರು ತಿಳಿಸಿದರು.

ಅದಕ್ಕೊಂದು ಪ್ರಾಧಿಕಾರ ಮಾಡಿ ಅದಕ್ಕೆ ಇವರೇ ಅಧ್ಯಕ್ಷರಾದರು. ಇಪ್ಪತ್ತು ವರ್ಷದ ಮೇಲೆ ಆಯಿತು. ರಸ್ತೆ ನಿರ್ಮಾಣ ಮಾಡಿದರಾ? ಇಲ್ಲ. ಆ ಭೂಮಿಯನ್ನು ನುಂಗಲು ಹೊರಟಿದ್ದಾರೆ. ಆದರೆ ಕೇವಲ ಎರಡು ಮೂರು ವರ್ಷದಲ್ಲಿ ಬೆಂಗಳೂರು-ಮೈಸೂರು ನೂತನ ಹೆದ್ದಾರಿ ನಿರ್ಮಾಣವಾಯಿತು. ನಾನು ಮುಖ್ಯಮಂತ್ರಿ ಆಗಿದ್ದಾಗ ಅತ್ಯಂತ ಕ್ಷಿಪ್ರಗತಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಾಯಿತು ಎಂದು ಕುಮಾರಸ್ವಾಮಿ ಹೇಳಿದರು.

ಬಡವರ ಭೂಮಿಗೆ ಕನ್ನ ಹಾಕುವ ಇಂಥ ವ್ಯಕ್ತಿಗಳು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರಿಗೆ ಹೋರಾಟದ ಮೂಲಕವೆ ಉತ್ತರ ಕೊಡುತ್ತೇವೆ. ಯಾರೂ ಹೆದರಬೇಕಿಲ್ಲ. ಟೌನ್ ಶಿಪ್ ಹೆಸರಿನಲ್ಲಿ ಆ ಭಾಗದ ಫಲವತ್ತಾದ ಭೂಮಿಯನ್ನು ಲೂಟಿ ಮಾಡಲು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಯಾರು ಬಂದು ಸ್ವಾಧೀನ ಮಾಡಿಕೊಳ್ಳುತ್ತಾರೊ ನೋಡೋಣ. ಟೌನ್ ಶಿಪ್ ನೆಪದಲ್ಲಿ ಜನರಿಗೆ ಸುಳ್ಳು ಅಂಕಿ ಅಂಶ ಹೇಳುತ್ತಿದ್ದಾರೆ. ಡಿಕೆಶಿ ಜತೆ ಅಧಿಕಾರಿಗಳು ಕುಮ್ಮಕ್ಕಾಗಿ ಭೂಮಿಯನ್ನು ಲೂಟಿ ಮಾಡಲು ಹೊರಟಿದ್ದಾರೆ. 9 ಸಾವಿರ ಎಕರೆಯಲ್ಲಿ 3 ರಿಂದ 4 ಸಾವಿರ ಎಕರೆಯಷ್ಟು ಸರಕಾರಿ ಭೂಮಿ ಇದೆ ಎಂದು ಸುಳ್ಳು ಹೇಳಿದ್ದರು. ಆದರೆ ಅಸಲಿಗೆ ಅಲ್ಲಿರುವ ಸರಕಾರಿ ಭೂಮಿ 700 ಎಕರೆ ಮಾತ್ರ ಎಂದು ತೋರಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಎಚ್‍ಡಿಕೆ: ಭೂಮಿ ಕೊಡಲು ನಿರಾಕರಿಸುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅಧಿಕಾರಿಗಳು, ಅದರಲ್ಲಿಯೂ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ನೀವು ತಪ್ಪು ಮಾಡುತ್ತಿದ್ದೀರಿ. ಮುಂದೆ ಅದರ ಫಲ ಅನುಭವಿಸಬೇಕಾಗುತ್ತದೆ. ಈ ಸರಕಾರ ಇನ್ನೂ ಎರಡು ವರ್ಷ ಇರುತ್ತದೆ. ಆಮೇಲೆ ಏನಾಗುತ್ತದೆ ಎನ್ನುವುದು ನನಗೆ ಗೊತ್ತಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News