‘ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು’ | ಸ್ವಾಮೀಜಿಗಳು ಮಧ್ಯಪ್ರವೇಶ ಮಾಡುವುದು ಅನಗತ್ಯ : ಎಚ್‌ಡಿಕೆ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ರಾಜಕಾರಣಿಗಳು ರಾಜಕಾರಣ ಮಾಡಲಿ. ಆದರೆ, ಧರ್ಮಾಧಿಕಾರಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ನಾಯಕತ್ವ ಕಲಹದ ವಿಚಾರದಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶ ಮಾಡುವುದು ಅನಗತ್ಯ. ಅವರಿಗೆ ಇದರಲ್ಲಿ ಏನೂ ಕೆಲಸ ಇಲ್ಲ ಎಂದು ನುಡಿದರು.
ನಾನು ಎರಡು ಬಾರಿ ಸಿಎಂ ಆಗಿದ್ದೆ. ಅಧಿಕಾರದಲ್ಲಿದ್ದ ವೇಳೆ ನಾನು ಯಾವ ಮಠಾಧಿಪತಿಗಳ ನೆರವು ಕೇಳಲಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆ. ಜಾತಿ-ಧರ್ಮಗಳ ವಿಚಾರ ಹೇಳಿಕೊಂಡು ಧಾರ್ಮಿಕ ಕ್ಷೇತ್ರವನ್ನು ದುರುಪಯೋಗಪಡಿಸಿಕೊಂಡು, ರಾಜಕಾರಣ ಮಾಡುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಇದರಿಂದ ರಾಜ್ಯಕ್ಕೆ ದೊಡ್ಡ ನಷ್ಟ ಆಗುತ್ತದೆ. ರಾಜ್ಯದಲ್ಲಿ ಸಮಾಜಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರ ಅವಶ್ಯಕತೆ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಆಗುವ ಮುಜುಗರವಲ್ಲ, ಬದಲಿಗೆ ಕರ್ನಾಟಕ ರಾಜ್ಯದ ಜನತೆಗೆ ಆಗುವ ಮುಜುಗರ ಎಂದು ಕುಮಾರಸ್ವಾಮಿ ಟೀಕಿಸಿದರು.
ಈ ಸರಕಾರಕ್ಕೆ ಜನ 140 ಸ್ಥಾನ ನೀಡಿದ್ದರು. ಅಷ್ಟು ಬಹುಮತ ಕೊಟ್ಟರೂ ಜನರ ನಿರೀಕ್ಷೆ ಹುಸಿ ಮಾಡಿದ್ದಾರೆ. ಎರಡೂವರೆ ವರ್ಷದಿಂದ ಇವರು ಮಾಡಿದ್ದು ಏನು? ಕುರ್ಚಿಗಾಗಿ ಕಿತ್ತಾಟ ಮಾಡುತ್ತಿದ್ದಾರೆ. ರಾಜ್ಯದ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು ಎನ್ನುವ ಪರಿಜ್ಞಾನ ಇವರಿಗೆ ಇಲ್ಲ ಎಂದು ಅವರು ಕಿಡಿಕಾರಿದರು
ಜೆಡಿಎಸ್-ಬಿಜೆಪಿ ಪಕ್ಷಗಳು ಸರಕಾರದ ಬಗ್ಗೆ ಸುಳ್ಳು ಹೇಳುತ್ತಿವೆ. ಸಿದ್ದರಾಮಯ್ಯನವರು ಒಬ್ಬರೇ ಸತ್ಯ ಹರಿಶ್ಚಂದ್ರ. ಪಾಪ.. ಸತ್ಯ ಹರಿಶ್ಚಂದ್ರ ಕಾಡಿಗೆ ಹೋಗಬೇಕಾದರೆ ಸಿದ್ದರಾಮಯ್ಯನ ಹುಂಡಿ ಮೇಲೆ ಹೋಗಿರಬೇಕು. ಅದಕ್ಕೆ ಸಿದ್ದರಾಮಯ್ಯ ಹೀಗೆ ಹೇಳುತ್ತಿರಬಹುದು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಪೊಲೀಸರಿಂದಲೇ ದರೋಡೆ:
ಸಿದ್ದರಾಮಯ್ಯ ಸಿಎಂ ಆದರೆ ಕೆಲ ಪೊಲೀಸರೇ ದರೋಡೆ ಸೇರಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುತ್ತಾರೆ. ಈ ಹಿಂದೆ ಅವರು ಸಿಎಂ ಆಗಿದ್ದಾಗ ಮೈಸೂರಿನ ಬಿಳಿಕೆರೆಯಲ್ಲಿ ಬಸ್ಸಿನಲ್ಲಿ ಹಣವನ್ನು ದೋಚಲಾಗಿತ್ತು. ಆ ಪ್ರಕರಣದಲ್ಲಿಯೂ ಪೊಲೀಸ್ ಅಧಿಕಾರಿಯೊಬ್ಬ ಭಾಗಿಯಾಗಿದ್ದ. ಇತ್ತೀಚೆಗೆ ಎಟಿಎಂ ಹಣ ದರೋಡೆ ಮಾಡಿದ ಪ್ರಕರಣದಲ್ಲಿಯೂ ಪೊಲೀಸ್ ಒಬ್ಬ ಭಾಗಿ ಆಗಿದ್ದಾನೆ. ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಾಗ ಮಾತ್ರವೇ ಏಕೆ ಹೀಗೆ ಆಗುತ್ತದೆ? ಎಂದು ಅವರು ಪ್ರಶ್ನಿಸಿದರು.