×
Ad

ಚಿಕ್ಕಮಗಳೂರು ಜಿಲ್ಲಾದ್ಯಂತ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ನದಿಗಳಲ್ಲಿ ಹೆಚ್ಚಿದ ನೀರಿನ ಹರಿವು

Update: 2025-05-25 17:57 IST

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಕಳೆದೊಂದು ವಾರದಿಂದ ಮಳೆಯ ಆರ್ಭಟ ಜೋರಾಗಿದ್ದು, ಶನಿವಾರ ಹಾಗೂ ರವಿವಾರ ಮಳೆ ಮತ್ತಷ್ಟು ಬಿರುಸುಗೊಂಡಿದೆ. ಭಾರೀ ಮಳೆಯಗೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

ಧಾರಾಕಾರ ಮಳೆಗೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹಳ್ಳಕ್ಕೆ ಉರುಳಿ ಬಿದ್ದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರೀ ಮಳೆಗೆ ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, ಹಳ್ಳಕೊಳ್ಳಗಳು, ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದೆ.

ಕಾಫಿನಾಡಿನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಕಳೆದ ಮೂರು ದಿನಗಳಿಂದ ಮತ್ತಷ್ಟು ಬಿರುಸುಗೊಂಡಿದೆ. ಶನಿವಾರ ಬೆಳಗ್ಗೆ ಹಾಗೂ ಸಂಜೆ ಧಾರಾಕಾರವಾಗಿ ಮಳೆ ಸುರಿದಿದ್ದು, ಮಳೆ ಆರ್ಭಟ ರವಿವಾರವೂ ಮುಂದುವರಿದಿತ್ತು. ರವಿವಾರ ಸುರಿದ ಮಳೆಗೆ ಕಾಫಿನಾಡಿನ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಿರಂತರ ಮಳೆಗೆ ಕಳೆದ ಮೂರು ದಿನಗಳಿಂದ ಜನ ಹಾಗೂ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.

ಭಾರೀ ಮಳೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ನೂರಾರು ಮರಗಳು ಧರೆಗುರುಳಿದಿದ್ದು, ಚಾರ್ಮಾಡಿ ಘಾಟ್, ಚಿಕ್ಕಮಗಳೂರು-ಶೃಂಗೇರಿ- ಆಗುಂಬೆ-ತೀರ್ಥಹಳ್ಳಿ ಸಂಪರ್ಕದ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿತ್ತು. ಭಾರೀ ಮಳೆಯಿಂದಾಗಿ ರವಿವಾರ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು, ಪೊಲೀಸರು ಹಳ್ಳಕ್ಕೆ ಬಿದ್ದಿದ್ದ ಕಾರನ್ನು ಮೇಲೆತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಸುರಿದ ಭಾರೀ ಮಳೆ ಪರಿಣಾಮ ಮಲೆನಾಡು ಭಾಗದ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವಿನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಮಳೆಯ ಆರ್ಭಟ ಸಂಜೆ ಮತ್ತಷ್ಟು ಬಿರುಸುಗೊಳ್ಳುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಕಳಸ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ರವಿವಾರ ಮಧ್ಯಾಹ್ನ ಬಳಿಕ ಮಳೆ ಕೊಂಚ ಬಿಡುವು ನೀಡಿದ್ದು, ಸಾರ್ವಜನಿಕರು ನಿಟ್ಟುಸಿರುವ ಬಿಡುವಂತಾಗಿದೆ. ಕಳಸ ತಾಲೂಕಿನ ಹಲವೆಡೆ ಭಾರೀ ಮಳೆಯಾಗಿದ್ದು, ಭದ್ರಾ ನದಿ ತುಂಬಿ ಹರಿಯಲಾರಂಭಿಸಿದ್ದು, ಭದ್ರಾ ನದಿಯ ಹಳೆಯ ಹೆಬ್ಬಾಳೆ ಸೇತುವೆ ನದಿ ನೀರಿನಲ್ಲಿ ಮುಳುಗಡೆಯಾಗುವ ಹಂತದಲ್ಲಿದೆ. ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿರುವುದರಿಂದ ಕಾಫಿ, ಅಡಿಕೆ ತೋಟಗಳಿಗೆ ಉತ್ತಮ ನೀರು ಸಿಕ್ಕಿದ್ದರೂ ನಿರಂತರ ಮಳೆಯಿಂದಾಗಿ ಕಾಫಿ, ಅಡಿಕೆ ಬೆಳೆಗಳಿಗೆ ಕೊಳೆ ರೋಗ ಹರಡುವ ಆತಂಕ ಬೆಳೆಗಾರರದ್ದಾಗಿದೆ.

ಇನ್ನು ಚಿಕ್ಕಮಗಳೂರು ತಾಲೂಕಿನಾದ್ಯಂತ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಶನಿವಾರ ಹಾಗೂ ರವಿವಾರ ಚಿಕ್ಕಮಗಳೂರು ನಗರ ಹಾಗೂ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಭಾರೀ ಮಳೆಗೆ ನಗರದಲ್ಲಿ ಶನಿವಾರ ಹಾಗೂ ರವಿವಾರ ಬೆಳಗ್ಗೆ, ಸಂಜೆ ಜನ, ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿತ್ತು. ಇನ್ನು ಜಿಲ್ಲೆಯ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News