ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲವನ್ನು ತೀರ್ಮಾನ ಮಾಡುವುದು ಹೈಕಮಾಂಡ್: ಡಿ.ಕೆ. ಸುರೇಶ್
"ಪಕ್ಷ ಹೇಳಿದಷ್ಟು ದಿನ ಶಿವಕುಮಾರ್ ಅವರು ಅಧ್ಯಕ್ಷ ಸ್ಥಾನದಲ್ಲಿ ಇರುತ್ತಾರೆ"
ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲವನ್ನು ತೀರ್ಮಾನ ಮಾಡುವುದು ಹೈಕಮಾಂಡ್. ಹೀಗಾಗಿ, ಅವರು ಯಾವ ತೀರ್ಮಾನ ಮಾಡಲಿದೆ ಎಂದು ಕಾದು ನೋಡೋಣ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ.
ರವಿವಾರ ಇಲ್ಲಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಇದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ ಆಗಿದ್ದು, ಕಾದು ನೋಡೋಣ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪವನ್ನು ಹೈಕಮಾಂಡ್ ಮುಂದೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ತೀರ್ಮಾನ, ಸಲಹೆಯನ್ನು ಶಿವಕುಮಾರ್ ಅವರು ಕೇಳುತ್ತಾರೆ. ಶಿವಕುಮಾರ್ ಅವರು ಮಾತ್ರವಲ್ಲ, ಎಲ್ಲರೂ ಕೇಳುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಬೇಕು ಎಂಬ ಆಸೆ ಶಿವಕುಮಾರ್ ಅವರಿಗಿಲ್ಲ. ಪಕ್ಷ ಮುಂದುವರಿಯಲು ಹೇಳಿದೆ, ಎಷ್ಟು ದಿನ ಅವಕಾಶ ನೀಡುತ್ತಾರೋ ಅಷ್ಟು ದಿನ ಪಕ್ಷದ ಕೆಲಸ ಮಾಡಿಕೊಂಡು ಇರುತ್ತಾರೆ ಎಂದು ಹೇಳಿದರು.