ಬೆಂಗಳೂರು : ಮತದಾರರ ಹೆಸರುಗಳನ್ನು ಡಿಲೀಟ್ ಮಾಡುವುದು ಪೂರ್ವಯೋಜಿತ ಕೃತ್ಯವಾಗಿದ್ದು, ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಶೇ. 99ರಷ್ಟು ಅರ್ಜಿ ನಮೂನೆ 7(ಫಾರಂ-7) ಸಲ್ಲಿಕೆಯಾಗಿವೆ. ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿದೆ. ಈ ಸಂಬಂಧ ಸತ್ಯಾಂಶವನ್ನು ಪತ್ತೆಹಚ್ಚಬೇಕಾಗಿದ್ದು, ತನಿಖೆ ನಡೆಸುವ ಅಗತ್ಯವಿದೆ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹೈಕೋರ್ಟ್‌ನಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿದ ಆರೋಪದಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬೂತ್‌ಮಟ್ಟದ ಏಜೆಂಟ್‌ಗಳಾದ (ಬಿಎಲ್‌ಎ) ಜಿ.ಎಸ್. ವಸಂತಲಕ್ಷ್ಮೀ, ಆರ್. ದೀಪಕ್ ಸಿಂಗ್ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ಎಸ್‌ಐಆರ್ ಪ್ರಕ್ರಿಯೆ ಸಂದರ್ಭದಲ್ಲಿ ಮತದಾರರು ಬೂತ್ ಮಟ್ಟದ ಏಜೆಂಟರು (ಬಿಎಲ್‌ಎ) ಮತ್ತು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಮನೆಗೆ ತೆರಳಿದ ಸಂದರ್ಭದಲ್ಲಿ ಮತದಾರರು ಅಲ್ಲಿ ವಾಸಿಸುತ್ತಿದ್ದರು. ಇದನ್ನು ತಿಳಿದೂ ಅವರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುವ ಉದ್ದೇಶದಿಂದ ಅರ್ಜಿ ನಮೂನೆ-7 ಅನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಿದರು. ಇಲೆಕ್ಟ್ರಾನಿಕ್ ದಾಖಲೆಗಳ ನಾಶವನ್ನು ತಡೆಯುವ ದೃಷ್ಟಿಯಿಂದಲೂ ತನಿಖೆ ನಡೆಸಬೇಕಿದೆ. ಚುನಾವಣಾ ಆಯೋಗ ಹಾಗೂ ಪೊಲೀಸರ ವಿಚಾರಣೆಯ ವರದಿಗಳನ್ನು ನ್ಯಾಯಾಲಯದ ಮುಂದಿಡಲಾಗುವುದು. ಅವುಗಳನ್ನು ಪರಿಶೀಲಿಸಿ ನ್ಯಾಯಾಲಯವೇ ಸೂಕ್ತ ತೀರ್ಮಾನ ಕೈಗೊಳ್ಳಬಹುದು. ಆದ್ದರಿಂದ, ಅರ್ಜಿದಾರರ ವಿರುದ್ಧದ ತನಿಖೆಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಮುಂದುವರಿದು, ರಾಜಕೀಯ ಪಕ್ಷವು ಚುನಾವಣಾ ಆಯೋಗದ ಜತೆ ಸೇರಿಕೊಂಡು ಈ ಕೃತ್ಯ ನಡೆಸುತ್ತಿದೆ. ಇದರ ಹಿಂದಿನ ಉದ್ದೇಶ ಏನು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಆದ್ದರಿಂದ, ತನಿಖೆಗೆ ಅನುಮತಿ ನೀಡಿದರೆ ಅರ್ಜಿದಾರರನ್ನು ಬಂಧಿಸುವುದಿಲ್ಲ ಹಾಗೂ ಹೈಕೋರ್ಟ್ ಅನುಮತಿಯಿಲ್ಲದೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಿಲ್ಲ. ತನಿಖೆ ಮುಂದುವರಿಸಲು ಅನುಮತಿ ನೀಡಬೇಕು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ತನಿಖೆಗೆ ಈ ಮೊದಲು ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ವಿಸ್ತರಿಸಿತು. ಜತೆಗೆ, ಅರ್ಜಿದಾರರು ನೀಡಿರುವ ಅರ್ಜಿ ನಮೂನೆ 7ಕ್ಕೆ ಸಂಬಂಧಿಸಿದ ವಿದ್ಯುನ್ಮಾನ ದಾಖಲೆಗಳನ್ನು ಸಂರಕ್ಷಿಸಿಡಬೇಕು. ಅಗತ್ಯ ಕಂಡು ಬಂದರೆ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ವರ್ಗಾಯಿಸಬೇಕುಎಂದು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ನಿರ್ದೇಶಿಸಿತು. ಜತೆಗೆ, ತನಿಖೆಗೆ ನೀಡಿರುವ ತಡೆ ತೆರವು ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಕುರಿತ ಆದೇಶ ಕಾಯ್ದಿರಿಸಿತು.

ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲವೇ?

ಪ್ರತಿಯೊಬ್ಬ ಮತದಾರನಿಗೂ ಜವಾಬ್ದಾರಿ ಇರುತ್ತದೆ. ಸದ್ಯ ದೇಶದಾದ್ಯಂತ ಎಸ್‌ಐಆರ್ ಕುರಿತು ಚರ್ಚೆ ನಡೆಯುತ್ತಿದೆ ಎಂಬ ಅಂಶವನ್ನು ವಿಚಾರಣೆ ವೇಳೆ ಮೌಖಿಕವಾಗಿ ಉಲ್ಲೇಖಿಸಿದ ನ್ಯಾಯಪೀಠ, ಫಾರಂ-7 ಸಲ್ಲಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶವಿಲ್ಲವೇ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿತು. ಮತದಾರರು ನಿರ್ದಿಷ್ಟ ಸ್ಥಳದಲ್ಲಿ ವಾಸಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆಯೇ ಅಥವಾ ಕಾನೂನಿನಡಿ ಅಧಿಕಾರ ಹೊಂದಿರುವ ಚುನಾವಣಾ ಅಧಿಕಾರಿಗಳು ನಿರ್ಧರಿಸುತ್ತಾರೆಯೇ ಎಂದು ಪ್ರಶ್ನಿಸಿದ ನ್ಯಾಯಪೀಠ, ಚುನಾವಣಾಧಿಕಾರಿಗಳು ನಿರ್ಧಾರ ಕೈಗೊಂಡ ಬಳಿಕ ಕ್ರಮ ಕೈಗೊಳ್ಳಬಹುದಲ್ಲವೇ? ಅದಕ್ಕಾಗಿ ಪೊಲೀಸರಿಂದ ಸಮಾನಾಂತರ ತನಿಖೆ ಅಗತ್ಯವಿದೆಯೇ? ಎಂದೂ ಪ್ರಶ್ನಿಸಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor