ಕರ್ನಲ್ ಸೋಫಿಯಾ ಖುರೇಶಿ ಕುರಿತು ವಿವಾದಿತ ಹೇಳಿಕೆ | ಬಿಜೆಪಿ ಸಚಿವನ ವಿರುದ್ಧ ಕರ್ನಾಟಕದಲ್ಲೂ ಎಫ್‍ಐಆರ್: ಗೃಹ ಸಚಿವ ಜಿ.ಪರಮೇಶ್ವರ್
ಜಿ.ಪರಮೇಶ್ವರ್
ಬೆಂಗಳೂರು : ಕರ್ನಲ್ ಸೋಫಿಯಾ ಖುರೇಶಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ಕರ್ನಾಟಕದಲ್ಲೂ ಎಫ್‍ಐಆರ್ ದಾಖಲು ಮಾಡಲಾಗುವುದು. ಈ ಸಂಬಂಧ ಕಾನೂನು ಪ್ರಕ್ರಿಯೆ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ. ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವನ ವಿರುದ್ಧ ಎಫ್‍ಐಆರ್ ಮಾಡಿಕೊಂಡು, ಕ್ರಮ ತೆಗೆದುಕೊಳ್ಳುವ ಕುರಿತು ಕೇಂದ್ರ ಸರಕಾರಕ್ಕೆ ತಿಳಿಸುವಂತೆ ಬೆಳಗಾವಿ ಎಸ್ಪಿಗೆ ಸೂಚಿಸಿದ್ದೇನೆ. ಅಲ್ಲದೆ, ಬಿಜೆಪಿ ಮುಖಂಡನ ಹೇಳಿಕೆ ಕರ್ನಲ್ ಖುರೇಷಿ ಅವರಿಗಷ್ಟೇ ಅವಮಾನದಂತೆ ಅಲ್ಲ. ಇಡೀ ದೇಶಕ್ಕೆ ಅವಮಾನ ಮಾಡಿದಂತೆ. ಇಂತಹ ಕೀಳು ಮನಸ್ಸು ಯಾರಿಗೂ ಬರಬಾರದು ಎಂದು ತಿಳಿಸಿದರು.
ಕಳೆದ ಎರಡು ವರ್ಷದಿಂದಲೂ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಂದ್ರ ಸರಕಾರಕ್ಕೆ ಕೇಳುತ್ತಿದ್ದೇವೆ. ಅನೇಕ ಕಾರಣಗಳಿಂದ ತಡೆ ಆದರೆ, ಕೆಲವು ಸಂದರ್ಭದಲ್ಲಿ ಬರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಸಭೆ ನಡೆಸಿದ್ದಾರೆ. ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಹಣ ಬಿಡುಗಡೆ ಮಾಡಿಸುವಂತೆ ರಾಜ್ಯದ ಸಂಸದರಿಗೆ ಮನವಿ ಮಾಡಿದ್ದಾರೆ ಎಂದರು.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ನಡೆಯುವ ಸಮಾವೇಶ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಮುಖ್ಯವಾಗಿ ಕಂದಾಯ ಇಲಾಖೆಯಿಂದ 50 ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಇದೊಂದು ಸರಕಾರದ ಕಾರ್ಯಕ್ರಮ. ಲೋಕಸಭೆ ವಿರೋಧ ಪಕ್ಷ ನಾಯಕರಾದ ರಾಹುಲ್ ಗಾಂಧಿ, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ಸುರ್ಜೇವಾಲಾ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.