×
Ad

ಧರ್ಮಸ್ಥಳ ದೂರು | ಎಸ್‌ಐಟಿಯಿಂದ ಐಪಿಎಸ್ ಅಧಿಕಾರಿ ಹೊರಕ್ಕೆ? : ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು?

Update: 2025-07-24 13:47 IST

ಬೆಂಗಳೂರು : ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡದಿಂದ ಐಪಿಎಸ್ ಅಧಿಕಾರಿ ಸೌಮ್ಯಲತಾ ಹೊರಗುಳಿಯುವ ವಿಚಾರವನ್ನು ಅವರು ಅಧಿಕೃತವಾಗಿ ನನಗೆ ಮಾಹಿತಿ ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಎಸ್ಐಟಿ ತಂಡದಿಂದ ಐಪಿಎಸ್ ಅಧಿಕಾರಿ ಹೊರಗುಳಿಯುವ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಧಿಕೃತವಾಗಿ ನನಗೆ ಅವರು ಮಾಹಿತಿ ತಿಳಿಸಿಲ್ಲ. ಆದರೆ ಅನ್‌ಅಫಿಷಿಯಲ್ ಆಗಿ ಅವರು ತಂಡದಿಂದ ಹೊರಗುಳಿಯುವ ವಿಚಾರಕ್ಕೆ ಪತ್ರ ಬರೆದಿರುವುದು ಗೊತ್ತಾಗಿದೆ. ವೈಯಕ್ತಿಕ ಕಾರಣ ಇದೆ, ಹಾಗಾಗಿ ತಂಡದಿಂದ ಹೊರಗುಳಿಯುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಒಂದು ವೇಳೆ ಆ ರೀತಿ ಇದ್ದರೆ, ಅವರನ್ನು ಬದಲಾಯಿಸಲಾಗುವುದು ಎಂದು ತಿಳಿಸಿದರು.

ʼಜಾತಿಗಣತಿʼ ಕೇಂದ್ರ ಮತ್ತು ರಾಜ್ಯಕ್ಕೆ ಸಂಘರ್ಷವಿಲ್ಲ :

ಜಾತಿಗಣತಿ ಸಮೀಕ್ಷೆ ವಿಚಾರದಲ್ಲಿ ಕೇಂದ್ರ ಸರಕಾರಕ್ಕೂ ಮತ್ತು ರಾಜ್ಯಕ್ಕೆ ಸಂಘರ್ಷ ಏನೂ ಇಲ್ಲ. ರಾಜ್ಯದ ಮಟ್ಟಿಗೆ ನಾವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ ಮಾಡುತ್ತಿದ್ದೇವೆ. ರಾಜ್ಯದ ವತಿಯಿಂದ ನಮಗೇನು ಮಾನದಂಡಗಳಲ್ಲಿ ಬೇಕು ಅದನ್ನು ಮಾಡುತ್ತೇವೆ. ಕೇಂದ್ರ ಸರಕಾರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಮೀಕ್ಷೆ ಮಾಡುವುದಿಲ್ಲ. ಯಾರು ಎಷ್ಟು ಜನ ಇದ್ದಾರೆ ಎಂಬ ಅಂಕಿ ಅಂಶವನ್ನು ಮಾತ್ರ ಕೇಂದ್ರ ಮಾಡುತ್ತದೆ ಎಂದರು.

ಆಂಧ್ರಪ್ರದೇಶದಲ್ಲಿ ಬೆಂಗಳೂರಿನ ಬಿಜೆಪಿ ಮುಖಂಡರ ಹತ್ಯೆ ಪ್ರಕರಣದ‌ ಕುರಿತು ಪ್ರತಿಕ್ರಿಯಿಸಿ, ಆಂಧ್ರಪ್ರದೇಶ ಪೊಲೀಸರು ತನಿಖೆ ಮಾಡುತ್ತಾರೆ. ಹತ್ಯೆಯಾದವರು ನಮ್ಮ ರಾಜ್ಯದವರು ಆಗಿರುವುದರಿಂದ ಆಂಧ್ರ ಪೊಲೀಸರು ಇಲ್ಲಿಗೂ ಬಂದು ತನಿಖೆ ಮಾಡುತ್ತಾರೆ. ಆ ರಾಜ್ಯದ ಪೊಲೀಸರ ತನಿಖೆಗೆ ನಮ್ಮ ಪೊಲೀಸರು ಸಹಕಾರ ನೀಡುತ್ತಾರೆ ಎಂದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News