×
Ad

ರಾಜ್ಯ ಸರ್ಕಾರಕ್ಕೆ ಬರಬೇಕಾದ ಹಣವನ್ನು ಕೇಂದ್ರ ಸರ್ಕಾರ ನೀಡಿದರೆ ರಾಜ್ಯದ ಅಭಿವೃದ್ಧಿಗೆ ಸಹಾಯ: ಡಾ. ಜಿ.ಪರಮೇಶ್ವರ್

Update: 2025-05-15 13:57 IST

ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಬರಬೇಕಾದ ಹಣವನ್ನು ಕೇಂದ್ರ ಸರ್ಕಾರ ನೀಡಿದರೆ, ರಾಜ್ಯದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದಲೂ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದೇವೆ. ಅನೇಕ ಕಾರಣಗಳಿಂದ ನಿಧಾನವಾಗುತ್ತಿದೆ. ಕೆಲವು ಸಂದರ್ಭದಲ್ಲಿ ಬರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಸಭೆ ನಡೆಸಿದ್ದಾರೆ‌. ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಹಣ ಬಿಡುಗಡೆ ಮಾಡಿಸುವಂತೆ ರಾಜ್ಯದ ಸಂಸದರಿಗೆ ಮನವಿ ಮಾಡಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಐದುವರೆ ಸಾವಿರ ಕೋಟಿ ರೂ. ತಕ್ಷಣ ಬರಬೇಕು. ರಾಜ್ಯ ಮತ್ತು ಕೇಂದ್ರದ ನಡುವೆ ಇರುವ ಸಂಬಂಧದ ನಿಯಮಗಳನ್ನು ಆಧರಿಸಿ ಒತ್ತಾಯ ಮಾಡಬೇಕಾಗುತ್ತದೆ. ಕೊನೆಯ ಬಾರಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ, ದೆಹಲಿ ಪ್ರತಿಭಟನೆ ನಡೆಸಲಾಯಿತು. ನಮಗೆ ಬರಬೇಕಾದ ಅನುದಾನ ಮಂಜೂರು ಮಾಡಿದರೆ, ನಾವೇಕೆ ಒತ್ತಾಯಿಸುತ್ತೇವೆ. ಹಣ ಬಿಡುಗಡೆಯಾದರೆ ರಾಜ್ಯಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ. ಹಣ ಬಿಡುಗಡೆ ಮಾಡುವಂತೆ ನಾನು ಸಹ ಒತ್ತಾಯಿಸುತ್ತೇನೆ ಎಂದರು.

ನಿನ್ನೆ ನಡೆದ ಸಭೆಗೆ ಸಂಸದರು ಯಾವ ಕಾರಣಕ್ಕಾಗಿ ಬಂದಿಲ್ಲವೋ ಅವರಿಗೆ ಗೊತ್ತಿರುತ್ತದೆ. ಕೆಲಸ-ಕಾರ್ಯಗಳಿರುವುದರಿಂದ ಬಂದಿರಲಿಕ್ಕಿಲ್ಲ. ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿಯವರ ವತಿಯಿಂದ ಸಂಸದರಿಗೆ ಏನು ಗೌರವ ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಇದರಲ್ಲಿ ಎರಡು ಮಾತಿಲ್ಲ. ಯಾವ ಕಾರಣಕ್ಕಾಗಿ ಸಭೆಗೆ ಬಂದಿಲ್ಲ ಎಂಬುದು ನಮಗೆ ಗೊತ್ತಿಲ್ಲ‌ ಎಂದು ಹೇಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇದೇ 20ರಂದು ನಡೆಯುವ ಸಮಾವೇಶ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಮುಖ್ಯವಾಗಿ ಕಂದಾಯ ಇಲಾಖೆಯಿಂದ 50 ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಇದೊಂದು ಸರ್ಕಾರದ ಕಾರ್ಯಕ್ರಮ. ಲೋಕಸಭೆ ವಿರೋಧ ಪಕ್ಷ ನಾಯಕರಾದ ರಾಹುಲ್ ಗಾಂಧಿ, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ಸುರ್ಜೇವಾಲಾ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಉಪ ಮುಖ್ಯಮಂತ್ರಿಗಳು, ಗ್ರೇಟರ್ ಬೆಂಗಳೂರು ಪರಿಕಲ್ಪನೆಯನ್ನು ತಂದ ಡಿ.ಕೆ.ಶಿವಕುಮಾರ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಗ್ರೇಟರ್ ಬೆಂಗಳೂರು ಕಾನ್ಸೆಪ್ಟ್ ಯಶಸ್ವಿಯಾಗಲಿ. ಪ್ರಪಂಚದಲ್ಲಿ ಅನೇಕ ದೊಡ್ಡ ದೊಡ್ಡ ನಗರಗಳನ್ನು ನೋಡಿದ್ದೇವೆ. ಈ ಕಾನ್ಸೆಪ್ಟ್ ಯಾವ ರೀತಿ ಕೆಲಸ ಮಾಡಿದೆ ಎಂಬುದು ಗೊತ್ತಿದೆ. ಇಂದಿನಿಂದ ಪ್ರಾರಂಭವಾಗುತ್ತಿದ್ದು, ನ್ಯೂನತೆಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ಗ್ರೇಟರ್ ಬೆಂಗಳೂರಿನಿಂದ ಯೋಜನೆಗಳನ್ನು ನೀಡಲು, ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಲು ಅನುಕೂಲವಾಗುತ್ತದೆ ಎಂಬುದು ಮುಖ್ಯ ಉದ್ದೇಶ ಎಂದು ಹೇಳಿದರು.

ಮಧ್ಯಪ್ರದೇಶದ ಸಚಿವ ಹಾಗೂ ಬಿಜೆಪಿ ಮುಖಂಡ ವಿಜಯ್ ಶಾ ಎಂಬವರು ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿ, ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿಯ ಸೊಸೆ. ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವನ ವಿರುದ್ಧ ಎಫ್‌ಐಆರ್ ಮಾಡಿಕೊಂಡು, ಕ್ರಮ ತೆಗೆದುಕೊಳ್ಳುವ ಕುರಿತು ಕೇಂದ್ರ ಸರ್ಕಾರಕ್ಕೆ ತಿಳಿಸುವಂತೆ ಬೆಳಗಾವಿ ಎಸ್‌ಪಿ ಅವರಿಗೆ ಸೂಚಿಸಿದ್ದೇನೆ. ಬಿಜೆಪಿ ಮುಖಂಡನ ಹೇಳಿಕೆ ಇಡೀ ದೇಶಕ್ಕೆ ಅವಮಾನ ಮಾಡಿದಂತೆ. ಇಂತಹ ಕೀಳು ಮನಸ್ಸು ಯಾರಿಗೂ ಬರಬಾರದು‌ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News