×
Ad

‘ಎಸ್ಮಾ’ ಜಾರಿಗೊಳಿಸಿದರೆ ಸರಕಾರವೇ ಭಸ್ಮ: ಎಚ್.ವಿ.ಅನಂತಸುಬ್ಬರಾವ್

ಸಾರಿಗೆ ನೌಕರರ ಬಗ್ಗೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಟ ಬದ್ಧತೆಯಿದ್ದರೆ ಕೂಡಲೇ 38 ತಿಂಗಳ ವೇತನ ಬಾಕಿ ಕೊಡಬೇಕು. ಈ ಸರಕಾರಕ್ಕೆ 1,800 ಕೋಟಿ ರೂ. ಯಾವ ಲೆಕ್ಕವೂ ಅಲ್ಲ. ವಿದೇಶಿ ಕಂಪೆನಿಗಳಿಗೆ ನೂರಾರು ಎಕರೆ ಭೂಮಿ, ಕೋಟ್ಯಂತರ ರೂ. ಸಬ್ಸಿಡಿ ನೀಡಲಾಗುತ್ತದೆ. ಆದರೆ, ತಮ್ಮ ಬೆವರು-ರಕ್ತ ಬಸಿಯುವ ಕಾರ್ಮಿಕರಿಗೆ ವೇತನ ಕೊಡದಿದ್ದರೆ ಇವರಿಗೆ ಬಡವರ ಬಗ್ಗೆ ಬದ್ಧತೆಯಿದೆ ಎಂದು ಹೇಗೆ ನಂಬುವುದು. ನೀವು ಹತ್ತಿದ ಏಣಿಯನ್ನು ಒದೆಯಬೇಡಿ. ನಿಮ್ಮನ್ನು ಅದೇ ಏಣಿಯಿಂದ ಕೆಳಗಿಳಿಸುವುದು ನಮಗೆ ಗೊತ್ತು ಎಂದು ಅನಂತಸುಬ್ಬರಾವ್ ಎಚ್ಚರಿಸಿದರು.

Update: 2025-08-03 00:24 IST

ಬೆಂಗಳೂರು, ಆ.2: ‘ಲೋಕಸಭೆ ಪ್ರತಿಪಕ್ಷ ನಾಯಕ ಹಾಗೂ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಆ.5ಕ್ಕೆ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಅದಕ್ಕೂ ಮೊದಲೇ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿಯನ್ನು ಕೊಡಬೇಕು. ಇಲ್ಲವಾದರೆ ರಾಹುಲ್ ಗಾಂಧಿಗೆ ಸಾರಿಗೆ ನೌಕರರ ಮುಷ್ಕರದ ಸ್ವಾಗತ ಕೋರಬೇಕಾಗುತ್ತದೆ’ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಹಾಗೂ ಹಿರಿಯ ಕಾರ್ಮಿಕ ಮುಖಂಡ ಎಚ್.

ವಿ.ಅನಂತಸುಬ್ಬರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ‘ವಾರ್ತಾಭಾರತಿ’ ಪತ್ರಿಕೆ ಮತ್ತು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನಂತಸುಬ್ಬರಾವ್, ‘ರಾಜ್ಯ ಸರಕಾರ ನೌಕರರ ಸಮಸ್ಯೆಯನ್ನು ಬಗೆಹರಿಸದೆ ಆ.5ಕ್ಕೆ ನೌಕರರು ಕರೆ ನೀಡಿರುವ ಮುಷ್ಕರ ನಿರ್ಬಂಧಿಸಲು ಮುಂದಾಗುತ್ತಿರುವುದು ಸರಿಯಲ್ಲ. ಸಾರಿಗೆ ನೌಕರರ ವಿರುದ್ಧ ‘ಎಸ್ಮಾ’ ಜಾರಿಗೊಳಿಸಿದರೆ ‘ಸರಕಾರವೇ ಭಸ್ಮಾ’ ಆಗಲಿದೆ. ನಿಮ್ಮ ಎಸ್ಮಾಗಳಿಗೆ ಬಗ್ಗುವವರು ಇಲ್ಲಿ ಯಾರೂ ಇಲ್ಲ. ಕಾರ್ಮಿಕ ಇಲಾಖೆ ಮೂಲಕ ಸಂಧಾನ ಸಭೆಗೆ ಚಾಲನೆ ನೀಡಿ ಮುಷ್ಕರ ನಿರ್ಬಂಧಿಸಲು ಮುಂದಾದರೆ ಕಾರ್ಮಿಕರು ವಿಚಲಿತರಾಗುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

=ವಾರ್ತಾಭಾರತಿ: ಆ.5ಕ್ಕೆ ಸಾರಿಗೆ ನೌಕರರ ಮುಷ್ಕರ ಏಕೆ? ನಿಮ್ಮ ಪ್ರಮುಖ ಬೇಡಿಕೆಗಳೇನು?

ಅನಂತಸುಬ್ಬರಾವ್: ಸಾರಿಗೆ ನೌಕರರಿಗೆ ರಾಜ್ಯ ಸರಕಾರವು ನೀಡಬೇಕಿರುವ 38 ತಿಂಗಳ ವೇತನ ಹಿಂಬಾಕಿಯ ಮೊತ್ತ ಒಟ್ಟು 1,800 ಕೋಟಿ ರೂ.ಗಳನ್ನು ಕೊಡಬೇಕು. ನೌಕರರ ವೇತನ ಪರಿಷ್ಕರಣೆಯ ಮೊತ್ತವನ್ನು ಸಾರಿಗೆ ನಿಗಮಗಳೇ ನೀಡುತ್ತವೆ. ನಮ್ಮ ಬೇಡಿಕೆಗಳು ವಿಶೇಷವಾಗಿ ಏನೂ ಇಲ್ಲ. ಆದರೆ, ಸರಕಾರ ಇದೀಗ ಮಾತು ತಪ್ಪಿದೆ. ಮಾತ್ರವಲ್ಲ, ನೌಕರರು ಮುಷ್ಕರಕ್ಕೆ ಮುಂದಾಗುವಂತೆ ಪ್ರೇರೇಪಿಸಿದೆ.

2020ರ ಜನವರಿ 1ರಿಂದ, 2023ರ ಫೆಬ್ರವರಿ 1ರವರೆಗೆ ಒಟ್ಟು 38 ತಿಂಗಳ ವೇತನ ಹಿಂಬಾಕಿಯನ್ನು ನೀಡಬೇಕು. ಸಾರಿಗೆ ಸಂಸ್ಥೆ ನಿಯಮದಂತೆ 2024ರ ಜನವರಿ 1ರಿಂದ ಶೇ.25ರಷ್ಟು ವೇತನ ಪರಿಷ್ಕರಣೆ ಮಾಡಬೇಕೆಂಬುದು ನಮ್ಮ ಮುಖ್ಯ ಬೇಡಿಕೆಯಾಗಿದೆ. ಆ.5ರ ಬೆಳಗ್ಗೆ 6 ಗಂಟೆಯಿಂದ ಸಾರಿಗೆ ಸಂಸ್ಥೆಯ ಯಾವೊಬ್ಬ ನಿರ್ವಾಹಕ ಮತ್ತು ಚಾಲಕ ಸಹಿತ ನೌಕರರು ಬಸ್ ಹತ್ತುವುದಿಲ್ಲ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ.

=ವಾ.ಭಾ: ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆ ಆಗುವುದಿಲ್ಲವೇ?

ಅನಂತಸುಬ್ಬರಾವ್: ಮುಷ್ಕರದಿಂದ ಜನರಿಗೆ ಖಂಡಿತ ತೊಂದರೆ ಆಗುತ್ತದೆ. ಮೊದಲಿಗೆ ನಾವು ಸಾರ್ವಜನಿಕ ಪ್ರಯಾಣಿಕರ ಕ್ಷಮೆ ಕೋರುತ್ತೇವೆ. ನಮಗೂ ಜನಸಾಮಾನ್ಯರ ಬಗ್ಗೆ ಅತೀವ ಕಾಳಜಿ ಇದೆ. ಈ ಹಿಂದೆ 2024ರಲ್ಲಿ ಮುಷ್ಕರ ನಡೆಸಲು ನೀಡಿದ್ದ ನೋಟಿಸ್ ಅನ್ನು ಸರಕಾರದ ಭರವಸೆಯ ಹಿನ್ನೆಲೆಯಲ್ಲಿ ವಾಪಸ್ ಪಡೆದಿದ್ದೆವು. ಆದರೆ, ಈ ಬಾರಿ ಯಾವುದೇ ಬೇಡಿಕೆ ಈಡೇರಿಸುತ್ತಿಲ್ಲ. ಹೀಗಾಗಿ ಸಾರಿಗೆ ಸಂಸ್ಥೆಯ ಒಟ್ಟು 1.15 ಲಕ್ಷ ನೌಕರರು ಮುಷ್ಕರಕ್ಕೆ ತೀರ್ಮಾನಿಸಿದ್ದು, ಈ ವಿಚಾರದಲ್ಲಿ ನಮ್ಮದು ಯಾವುದೇ ಹಠಮಾರಿ ಧೋರಣೆ ಇಲ್ಲ. ಇದರಲ್ಲಿ ಕಾರ್ಮಿಕರು ಮತ್ತವರ ಕುಟುಂಬದವರ ಪ್ರಶ್ನೆ ಅಡಗಿದೆ. ಶೇ.15ರಷ್ಟು ಬಸ್ ಪ್ರಯಾಣ ದರ ಏರಿಕೆ ಬಳಿಕವೂ ನೌಕರರಿಗೆ ವೇತನ ಹಿಂಬಾಕಿ ಕೊಡುವುದಿಲ್ಲ ಎಂದರೆ ಏನು ಅರ್ಥ?.

=ವಾ.ಭಾ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿ, ಸಂಧಾನ ಪ್ರಕ್ರಿಯೆ ನಡೆಸಲಿಲ್ಲವೇ?

ಅನಂತಸುಬ್ಬರಾವ್: ಸಚಿವ ರಾಮಲಿಂಗಾರೆಡ್ಡಿ ಅಸಹಾಯಕರಾಗಿದ್ದಾರೆ. ನಮ್ಮ ಬೇಡಿಕೆಗಳಿಗೆ ಅವರು ಸ್ಪಂದಿಸಿದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ 1,800 ಕೋಟಿ ರೂ. ಕೊಡಲಿಕ್ಕೆ ಒಪ್ಪುತ್ತಿಲ್ಲ. ಸಿದ್ದರಾಮಯ್ಯನವರು ಸ್ವತಃ ತಾನು ಸಮಾಜವಾದಿ, ಎಸ್‌ಸಿ-ಎಸ್‌ಟಿ ವರ್ಗಗಳ ಪರ, ಅಹಿಂದ ಎಂದು ಹೇಳುತ್ತಾರೆ. ಆದರೆ, ಕಾರ್ಮಿಕರ ವಿಚಾರದಲ್ಲಿ ‘ನಿಮಗೆ ನಾವು(ಸರಕಾರ) ಏನೂ ಕೊಡಬೇಕಿಲ್ಲ ಎಂದು 38 ತಿಂಗಳ ವೇತನ ಬಾಕಿ ನೀಡಲು ಸಾಧ್ಯವಿಲ್ಲ’ ಎಂದು ಹೇಳುತ್ತಾರೆ. ಸಾರಿಗೆ ಸಂಸ್ಥೆಯ ಬಹುತೇಕ ನೌಕರರು ಎಸ್‌ಸಿ-ಎಸ್‌ಟಿ ಮತ್ತು ಅಹಿಂದ ವರ್ಗಗಳಿಂದಲೇ ಬಂದವರು. ಹೀಗಾಗಿ ಅವರು ಬದ್ಧತೆ ಪ್ರದರ್ಶಿಸಬೇಕು.

=ವಾ.ಭಾ: ನೌಕರರ ವೇತನ ಪರಿಷ್ಕರಣೆ ಸಂಬಂಧ ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ರಚಿಸಿದ್ದ ಶ್ರೀನಿವಾಸ ಮೂರ್ತಿ ಸಮಿತಿ ವರದಿಯಲ್ಲೇನಿತ್ತು?

ಅನಂತಸುಬ್ಬರಾವ್: ಸಾರಿಗೆ ನೌಕರರ ವಿಚಾರದಲ್ಲಿ ಹಿಂದಿನ ಬಿಜೆಪಿ ಸರಕಾರವೇ ಸ್ಪಂದಿಸಿದೆ. ಆದರೆ, ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬುದು ಬೇಸರದ ಸಂಗತಿ. ಶ್ರೀನಿವಾಸಮೂರ್ತಿ ನೇತೃತ್ವದ ಏಕಸದಸ್ಯ ಸಮಿತಿ ವರದಿಯನ್ನೂ ನೀಡಿದೆ. ಅದನ್ನು ಆಧರಿಸಿಯೇ ನೌಕರರಿಗೆ ವೇತನ ಹಿಂಬಾಕಿ ನೀಡಲು ಮತ್ತು ನೂತನ ವೇತನ ಪರಿಷ್ಕರಣೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಪ್ಪಿದ್ದರು. ಆದರೆ, ಇದೀಗ ವೇತನ ಹಿಂಬಾಕಿ ನೀಡಲು ಸರಕಾರ ನಿರಾಕರಿಸುತ್ತಿದೆ. ಅಲ್ಲದೆ, 2023ರ ಡಿಸೆಂಬರ್‌ನಲ್ಲಿ ವೇತನ ಪರಿಷ್ಕರಣೆ ಜಾರಿಗೊಳಿಸಿರುವುದರಿಂದ 2027ರ ವರೆಗೆ ಹೊಸ ವೇತನ ಪರಿಷ್ಕರಣೆ ಇಲ್ಲ ಎಂದು ಸರಕಾರ ಹೇಳುತ್ತಿದೆ. ಇದು ಸಾರಿಗೆ ಇಲಾಖೆ ಕಾರ್ಮಿಕರಿಗೆ ಮಾಡುತ್ತಿರುವ ದ್ರೋಹ.

=ವಾ.ಭಾ: ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಘಟನೆಗಳ ನಡುವಿನ ಒಗ್ಗಟ್ಟು ಹೇಗಿದೆ?.

ಅನಂತಸುಬ್ಬರಾವ್: ಸಾರಿಗೆ ನಿಗಮಗಳ ಎಲ್ಲ ಕಾರ್ಮಿಕ ಸಂಘಟನೆಗಳನ್ನು ಒಳಗೊಂಡು ಜಂಟಿ ಕ್ರಿಯಾ ಸಮಿತಿಯಿಂದಲೇ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಂಸ್ಥೆಯ ಶ್ರೇಯೋಭಿವೃದ್ಧಿ ಮತ್ತು 1.15 ಲಕ್ಷ ಮಂದಿ ಸಾರಿಗೆ ನೌಕರರ ಕಲ್ಯಾಣದ ದೃಷ್ಟಿಯಿಂದ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಆದರೆ, ಸರಕಾರ, ಖಾಸಗಿಯವರ ಮೂಲಕ ಬಸ್ ಓಡಿಸುವ ಇರಾದೆಯಲ್ಲಿದ್ದು, ಮುಷ್ಕರವನ್ನು ಮುರಿಯಲು ಯತ್ನಿಸುತ್ತಿದೆ. ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ.

ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ ಯಶಸ್ವಿಯಾಗಿ ಜಾರಿ ಮಾಡಿದ ಕೀರ್ತಿ ಸಂಸ್ಥೆ ನೌಕರರಿಗೆ ಸಲ್ಲಬೇಕು. 14 ಸಾವಿರ ಸಿಬ್ಬಂದಿ ಮತ್ತು 3 ಸಾವಿರದಷ್ಟು ಬಸ್‌ಗಳ ಕೊರತೆ ಇದ್ದರೂ ಯೋಜನೆ ಯಶಸ್ವಿಗೊಳಿಸಿದ್ದೇವೆ. ‘ಶಕ್ತಿ ಯೋಜನೆ’ಯಿಂದ ಸಾರಿಗೆ ಬಸ್‌ಗಳಲ್ಲಿ ಶೇ.65ರಷ್ಟು ಪ್ರಯಾಣಿಕರ ಹೆಚ್ಚಳವಾಗಿದೆ ಎಂದು ಸರಕಾರವೇ ಹೇಳುತ್ತಿದೆ. 500 ಕೋಟಿ ಟಿಕೆಟ್ ವಿತರಣೆ ಮಾಡಿ ಸಂಭ್ರಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಯೋಜನೆ ಯಶಸ್ವಿಯಾಗಲು ಸಂಸ್ಥೆಯ ಕಾರ್ಮಿಕರು ಮತ್ತು ಅಧಿಕಾರಿಗಳ ಪರಿಶ್ರಮವಿದೆ ಎಂಬುದು ತಿಳಿಯದು. ಕನಿಷ್ಠ ಪಕ್ಷ ಸಾರಿಗೆ ನೌಕರರಿಗೆೆ ಒಂದು ಧನ್ಯವಾದವನ್ನೂ ಹೇಳಲಿಲ್ಲ.

-ಎಚ್.ವಿ.ಅನಂತಸುಬ್ಬರಾವ್,

ಅಧ್ಯಕ್ಷ, ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪ್ರಕಾಶ್ ಸಿ. ರಾಮಜೋಗಿಹಳ್ಳಿ

contributor

Similar News