×
Ad

ಆರೆಸ್ಸೆಸ್ ಸ್ವಯಂ ಸೇವಕ ಸಂಘವಾಗಿದ್ದರೆ, ಅದರ ನೋಂದಣಿ ಪತ್ರವನ್ನು ತೋರಿಸಲಿ: ಸಚಿವ ಪ್ರಿಯಾಂಕ್ ಖರ್ಗೆ

"ಆರೆಸ್ಸೆಸ್ ನಿಷೇಧ ಮಾಡುವಂತೆ ಹೇಳಿಲ್ಲ, ಆದರೆ ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ಬೇಡ ಎಂದಿದ್ದೇನೆ"

Update: 2025-10-13 20:40 IST

ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ನಿಷೇಧ ಮಾಡುವಂತೆ ನಾನೂ ಎಲ್ಲಿಯೂ ಹೇಳಿಲ್ಲ. ಆದರೆ, ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ಬೇಡ ಎಂದಿದ್ದೇನೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಒಬ್ಬ ಹಿಂದೂ. ಆದರೆ ಹಿಂದೂ ಧರ್ಮದ ವಿರೋಧಿ ಅಲ್ಲ. ಆದರೆ, ಆರೆಸ್ಸೆಸ್ ವಿರೋಧಿಸುವೆ. ದಲಿತ, ಹಿಂದುಳಿದ ಸೇರಿದಂತೆ ಬೇರೆ ಸಂಘಟನೆಯವರು ದೊಣ್ಣೆ ಹಿಡಿದು ಓಡಾಡಿದರೆ ಇವರು ಸಮ್ಮತಿ ಸೂಚಿಸುತ್ತಾರೆಯೇ?. ಶಾಲೆಗಳಲ್ಲಿ ಆರೆಸ್ಸೆಸ್ ʼಬ್ರೈನ್ ವಾಷಿಂಗ್ ನಿಲ್ಲಬೇಕುʼ ಎಂದು ಅವರು ಹೇಳಿದರು.

ಮಾಜಿ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರು ಆರೆಸ್ಸೆಸ್ ಅನ್ನು ನಿಷೇಧ ಮಾಡಿದ್ದರು. ಇತಿಹಾಸದ ಪುಟವನ್ನು ತಿರುಗಿಸಿ ಆರೆಸ್ಸೆಸ್‍ನವರು ಓದಲಿ. ಸಂಘದವರು ಬಂದು ಪಟೇಲರ ಕೈ ಕಾಲಿಗೆ ಬಿದ್ದಿದ್ದರು. ನಾವು ಕೇಂದ್ರದ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ನಿಯತ್ತು ರಾಷ್ಟ್ರಧ್ವಜಕ್ಕೆ ಇರುತ್ತದೆ. ಹೀಗಂತ ಆಗ ಕ್ಷಮೆ ಕೋರಿದ್ದರು. ಈ ಹಂತ ತಲುಪಿದಾಗ ಆರೆಸ್ಸೆಸ್ ನಿಷೇಧ ಹಿಂಪಡೆಯಲಾಯಿತು ಎಂದು ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದರು.

ಆರೆಸ್ಸೆಸ್‍ನವರು ಹೇಡಿಗಳು. ಅವರ ಇತಿಹಾಸದ ಪುಟ ತೆಗೆದು ನೋಡಿಬೇಕು. ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ತೆಗೆದುಕೊಳ್ಳುತ್ತಿದ್ದರು. ಅವರು ಈಗ ದೇಶ ಭಕ್ತರಾಗಿದ್ದಾರೆಯೇ. ಅಲ್ಲದೆ, ರಾಷ್ಟ್ರ ಧ್ವಜವನ್ನೆ ಅವರ ಕಚೇರಿ ಮೇಲೆ ಹಾಕಿರಲಿಲ್ಲ. ಇಂತವರು ಹೇಗೆ ದೇಶ ಭಕ್ತರಾಗುತ್ತಾರೆ ಎಂದು ಅವರು ಪ್ರಶ್ನಿಸಿದರು.

ಚುನಾವಣೆ ಬಂದಾಗ ಗಣವೇಶ ಹಾಕುತ್ತಾರೆ. ನಿನ್ನೆ ಆರ್ ಆರ್ ನಗರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಗಣವೇಶ ಹಾಕಿದ್ದರು. ಗಾಂಧೀಜಿಯವರ ಫೋಟೋ ಹಿಡಿದಿದ್ದರು. ಅವರಿಗೆ ಇತಿಹಾಸವೇ ಗೊತ್ತಿಲ್ಲ, ಗಾಂಧಿಜೀ ಕೊಂದವರು ಅವರ ಫೋಟೋ ಹಿಡಿದಿದ್ದಾರೆ. ನಮಲ್ಲಿ ಒಡಕು ಸೃಷ್ಠಿಮಾಡುವುದು ಅವರ ಉದ್ದೇಶ ಎಂದು ಅವರು ಹೇಳಿದರು.

ಆರೆಸ್ಸೆಸ್ ಸ್ವಯಂ ಸೇವಕ ಸಂಘವಾಗಿದ್ದರೆ, ಅದರ ನೋಂದಣಿ ಪತ್ರವನ್ನು ತೋರಿಸಲಿ, ಅವರಿಗೆ ಯಾವ ಮೂಲದಿಂದ ಹಣ ಬರುತ್ತದೆ. 300, 400 ಕೋಟಿ ರೂಪಾಯಿಗಳಷ್ಟು ಆಸ್ತಿಗಳನ್ನು ಹೇಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News