×
Ad

ಪರಿಸರಕ್ಕೆ ಹಾನಿಯಾಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ

Update: 2024-08-13 21:17 IST

ಬೆಂಗಳೂರು : ಅರಣ್ಯ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಎರಡೂ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ನಡೆಸಲಾಯಿತು.

ಹಾಲಿ ಶರಾವತಿ ಜಲ ವಿದ್ಯುತ್ ಯೋಜನೆ ವ್ಯಾಪ್ತಿಯ ಕಾರಿಡಾರ್ ನಲ್ಲೇ ಪಂಪ್ಡ್ ಸ್ಟೋರೇಜ್ ಯೋಜನೆ ಬರುತ್ತಿರುವುದರಿಂದ ಅರಣ್ಯ ಹಾನಿಯ ಕನಿಷ್ಠ ಪ್ರಮಾಣದಲ್ಲಿರುತ್ತದೆ ಎಂದು ಕೆ.ಜೆ.ಜಾರ್ಜ್ ಸೇರಿದಂತೆ ಇಂಧನ ಇಲಾಖೆ ಅಧಿಕಾರಿಗಳು ಅರಣ್ಯ ಸಚಿವರಿಗೆ ಮಂಗಳವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು.

ಇದನ್ನು ಪರಿಗಣಿಸಿದ ಈಶ್ವರ್ ಖಂಡ್ರೆ, ಕೇಂದ್ರದಿಂದ ಸೂಕ್ತ ಅನುಮತಿಗಳಿಗಾಗಿ ಒಂದು ತಿಂಗಳಲ್ಲಿ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು, ಹಾಲಿ ವಿದ್ಯುತ್ ಉತ್ಪಾದನೆ ಮಾಡುವ ಜಲಾಶಯದಿಂದ ಹರಿಯುವ ನೀರನ್ನು ಮೋಟರ್ ಪಂಪ್ ಗಳ ಮೂಲಕ ಮೇಲಕ್ಕೆ ಹರಿಸಿ ಮತ್ತೆ ವಿದ್ಯುತ್ ಉತ್ಪಾದಿಸುವ ಯೋಜನೆಯಾಗಿದೆ ಎಂದು ಹೇಳಿದರು.

ಪರಿಸರ ಮತ್ತು ಅರಣ್ಯದ ಮೇಲೆ ಯಾವುದೇ ಗಂಭೀರ ಪರಿಣಾಮ ಉಂಟಾಗದಂತೆ ಸುಮಾರು 2 ಸಾವಿರ ಮೆಗಾವ್ಯಾಟ್ ನಷ್ಟು ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಹೀಗಾಗಿ ಅದಕ್ಕೆ ಸಂಬಂಧಿಸಿದ ಅಗತ್ಯ ಅನುಮತಿಗಳನ್ನು ನೀಡಲು ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಾರ್ಜ್ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸಂಬಂಧಿಸಿದ ಜಿಲ್ಲಾ ಅರಣ್ಯಾಧಿಕಾರಿಗಳಿಗೂ ಸೂಕ್ತ ಸಲಹೆಗಳನ್ನು ನೀಡಿ ವರದಿ ಕಳುಹಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕೆಪಿಸಿಎಲ್ ಮತ್ತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News