ಜಮೀನಿನ ಸಮಸ್ಯೆ ಬಗೆಹರಿಸಿದರೆ ಕ್ಲಸ್ಟರ್ ಮಾದರಿ ಕೈಗಾರಿಕೆ ಅಭಿವೃದ್ಧಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ
ಬೆಂಗಳೂರು: ಕರ್ನಾಟಕದಲ್ಲಿ ಜಮೀನಿನ ಬೆಲೆ ತಾರಕಕ್ಕೇರಿದ್ದು, ಕೈಗಾರಿಕಾ ಹೂಡಿಕೆಗೆ ಇದು ಸವಾಲಾಗಿದೆ. ಎಷ್ಟೋ ಸಲ ಯೋಜನೆಯ ಹೂಡಿಕೆಗಿಂತ ಇದರ ವೆಚ್ಚವೇ ಹೆಚ್ಚಾಗುತ್ತದೆ. ರಾಜ್ಯ ಸರಕಾರ ಈ ಸಮಸ್ಯೆ ಬಗೆಹರಿಸಿದರೆ, ಕೇಂದ್ರ ಸರಕಾರವು ಕ್ಲಸ್ಟರ್ ಮಾದರಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ಕೊಡಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಗುರುವಾರ ಬೆಂಗಳೂರು ಅರಮನೆಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ ಜಾಗತಿಕ ಹೂಡಿಕೆದಾರರ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ರಾಜ್ಯದ 30 ಸಾಧಕ ಎಂ.ಎಸ್.ಎಂ.ಇ ಉದ್ಯಮಿಗಳಿಗೆ ‘ಎಸ್‍ಎಂಇ ಕನೆಕ್ಟ್ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಕರೆ ನೀಡಿದರು.
ದೇಶದ ಜಿಡಿಪಿಗೆ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಪಾಲು ಶೇ.30ರಷ್ಟಿದ್ದು, ಇಲ್ಲಿ 25 ಕೋಟಿ ಉದ್ಯೋಗಿಗಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಈ ವಲಯದ 7 ಲಕ್ಷ ಉದ್ಯಮಗಳಿಗೆ 27.5 ಲಕ್ಷ ಕೋಟಿ ರೂ. ಸಾಲ ಕೊಡಲಾಗಿದೆ. ಅಲ್ಲದೆ, ಎಂಎಸ್‍ಎಂಇ ನೀತಿಯನ್ನು ಬದಲಿಸಿದ್ದು, ಹೊಸದಾಗಿ ವರ್ಗೀಕರಣ ಮಾಡಲಾಗಿದೆ. ಸೂಕ್ಷ್ಮ ಕೈಗಾರಿಕೆಗಳ ವಾರ್ಷಿಕ ವಹಿವಾಟು ಮಿತಿಯನ್ನು 10 ಕೋಟಿ ರೂ.ಗಳಿಗೆ, ಸಣ್ಣ ಕೈಗಾರಿಕೆಗಳ ಮಿತಿಯನ್ನು 100 ಕೋಟಿ ರೂ.ವರೆಗೆ ಮತ್ತು ಮಧ್ಯಮ ಕೈಗಾರಿಕೆಗಳ ಮಿತಿಯನ್ನು 500 ಕೋಟಿ ರೂ.ವರೆಗೆ ಏರಿಸಲಾಗಿದೆ ಎಂದು ಅವರು ನುಡಿದರು.
ಕರ್ನಾಟಕದಲ್ಲಿ ಕೃಷಿ ಮತ್ತು ಕೈಗಾರಿಕೆ ಬೆಳವಣಿಗೆ ಎರಡನ್ನೂ ಪರಿಗಣಿಸಬೇಕಾಗಿದೆ. ರಾಜ್ಯದಲ್ಲಿ ಆಹಾರ ಸಂಸ್ಕರಣೆ, ಸೇವನೆಗೆ ಸಿದ್ಧವಾಗಿರುವ ಮತ್ತು ಸಿದ್ಧಪಡಿಸಲು ಸಿದ್ಧವಾಗಿರುವ ಆಹಾರ (ರೆಡಿ ಟು ಈಟ್ ಅಂಡ್ ರೆಡಿ ಟು ಕುಕ್ ಫುಡ್) ಉದ್ಯಮ ಬೆಳೆಸಲು ಹೇರಳ ಅವಕಾಶಗಳಿವೆ. ವಿದೇಶಗಳ ಜನರು ನಮ್ಮಿಂದ ಡಿಜಿಟಲ್ ತಂತ್ರಜ್ಞಾನ ಮತ್ತು ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಬಯಸುತ್ತಿದ್ದಾರೆ. ಯುವಜನರಿಗೆ ನಾವು ಕೌಶಲ್ಯ ಕೊಡುವತ್ತ ಒತ್ತು ಕೊಡಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
2ನೇ ಹಾಗೂ 3ನೇ ಹಂತದ ನಗರಗಳತ್ತ ಮುಖಮಾಡಿ: ಬೆಂಗಳೂರು ಹೊರತಾಗಿ ರಾಜ್ಯದ 2ನೇ ಹಾಗೂ 3ನೇ ಹಂತದ ನಗರಗಳತ್ತ ಉದ್ಯಮಿಗಳು ಮುಖ ಮಾಡಿದರೆ ಸರಕಾರ ನಿಮಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದಅವರು ಸಲಹೆ ನೀಡಿದರು.
ನಂಜುಂಡಪ್ಪ ವರದಿ ಆಧಾರದ ಮೇಲೆ ಹಿಂದುಳಿದ ತಾಲೂಕುಗಳನ್ನು ಗುರುತಿಸಲಾಗಿದ್ದು, ಅಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅನೇಕ ಪೆÇ್ರೀತ್ಸಾಹ ಕಾರ್ಯಕ್ರಮ ರೂಪಿಸಲಾಗಿದೆ. ಜತೆಗೆ ತಾಲೂಕು ಮಟ್ಟದಲ್ಲಿ ಕೈಗಾರಿಕಾ ಪ್ರದೇಶ ರೂಪಿಸುವ ಉದ್ದೇಶವಿದ್ದು, ಎಲ್ಲೆಡೆ ನೀರು ಹಾಗೂ ವಿದ್ಯುತ್ ಸೌಲಭ್ಯ ನೀಡಲಾಗುವುದು. ನೂತನ ಕೈಗಾರಿಕಾ ನೀತಿಯಲ್ಲಿ ದೊಡ್ಡ ಉದ್ಯಮಗಿಳಿಗಿಂತ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ನೆರವಿನ ಅವಕಾಶ ಕಲ್ಪಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಇಲ್ಲಿರುವ ಎಲ್ಲಾ ಉದ್ಯಮಿಗಳು ನಮ್ಮ ರಾಜ್ಯದ ಆಸ್ತಿ. ನೀವು ಬಲಿಷ್ಠವಾದಷ್ಟು ನಾವು ಬಲಿಷ್ಠವಾಗಿರುತ್ತೇವೆ. ನೀವು ದುರ್ಬಲವಾದರೆ ನಾವು ದುರ್ಬಲವಾಗುತ್ತೇವೆ. ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ ಸುಮಾರು 1 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಿರುವುದು ನಮ್ಮ ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಎಂದು ಅವರು ತಿಳಿಸಿದರು.
ಸೋಲಾರ್ ಪಾರ್ಕ್ ನಿರ್ಮಿಸುವ ಮೂಲಕ ಇಂಧನ ಸ್ವಾವಲಂಬನೆ ಸಾಧಿಸಿದ್ದೇವೆ. ಯಲಹಂಕದಲ್ಲಿ ಅನಿಲದ ಮೂಲಕ ಇಂಧನ ಉತ್ಪಾದನೆ ಕೇಂದ್ರ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಮೆಟ್ರೋ ವಿಸ್ತರಣೆ, ಡಬಲ್ ಡೆಕ್ಕರ್ ಮೇಲ್ಸೇತುವೆ ಸೇರಿದಂತೆ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಭೂಸ್ವಾಧೀನ ಸಮಸ್ಯೆ ಇರುವುದರಿಂದ ಟನಲ್ ರಸ್ತೆ ನಿರ್ಮಿಸಲು ಮುಂದಾಗಿದ್ದೇವೆ. ಬೆಂಗಳೂರಿಗೆ ಹೆಚ್ಚುವರಿಯಾಗಿ 6 ಟಿಎಂಸಿ ನೀರು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಈ ಸಮಾವೇಶದಿಂದ 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆ ಮಾಡಲಾಗಿದ್ದು, 19 ದೇಶಗಳಿಂದ ಅನೇಕ ಸಂಸ್ಥೆಗಳು ಇಲ್ಲಿ ಹೂಡಿಕೆ ಮಾಡಲು ಒಡಂಬಡಿಕೆ ಮಾಡಿಕೊಂಡಿವೆ. ಇನ್ನು ನಮ್ಮ ರಾಜ್ಯದಲ್ಲಿ ನೂತನ ಪ್ರವಾಸೋದ್ಯಮ ನೀತಿ ತರಲಾಗಿದೆ. ಇದರ ಜತೆಗೆ ಕರಾವಳಿ ಭಾಗದಲ್ಲಿ 300 ಕಿ.ಮೀ ಉದ್ದದ ಪ್ರದೇಶಕ್ಕೆ ವಿಶೇಷ ನೀತಿ ರೂಪಿಸಲು ಮುಂದಾಗಿದ್ದೇವೆ. ಕೃಷಿ ಕ್ಷೇತ್ರದಲ್ಲೂ ಅನೇಕ ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಗಣಿ ಇಲಾಖೆಯ ಕಾರ್ಯದರ್ಶಿ ರಮಣ್ ದೀಪ್ ಚೌಧರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ಕ್ವಿನ್ ಸಿಟಿಯಲ್ಲಿ ಕೆಎಲ್‍ಇ 1 ಸಾವಿರ ಕೋಟಿ ರೂ. ಹೂಡಿಕೆ’
ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಅಗತ್ಯವಿರುವ ಶಿಕ್ಷಣ, ಸೇವೆ ಮತ್ತು ಸಂಶೋಧನೆಗಳಿಗೆ ಕ್ವಿನ್ ಸಿಟಿಯಲ್ಲಿ ಮುಂದಿನ 5 ವರ್ಷಗಳಲ್ಲಿ 1 ಸಾವಿರ ಕೋಟಿ ರೂ. ಹೂಡುವುದಾಗಿ ಬೆಳಗಾವಿಯ ಕೆಎಲ್‍ಇ ಸೊಸೈಟಿ ಹೇಳಿದೆ. ಇದರಿಂದ 1,500 ಉದ್ಯೋಗಗಳು ಸೃಷ್ಟಿಯಾಗಲಿದೆ. ಕ್ವಿನ್ ಸಿಟಿಗೆ ಘೋಷಣೆಯಾಗಿರುವ ಪ್ರಪ್ರಥಮ ಹೂಡಿಕೆಯಾಗಿದೆ. ಇನ್ನುಳಿದಂತೆ ಸವದತ್ತಿಯ ಶಿವಶಕ್ತಿ ಶುಗರ್ಸ್ ಮತ್ತು ಇನಾಂದಾರ್ ಶುಗರ್ಸ್ ಕಾರ್ಖಾನೆಗಳು ಸಕ್ಕರೆ ಮತ್ತು ಎಥೆನಾಲ್ ಉತ್ಪಾದನೆಗೆ ಮುಂದಿನ 2 ವರ್ಷಗಳಲ್ಲಿ ಕ್ರಮವಾಗಿ 1 ಸಾವಿರ ಕೋಟಿ ರೂ. ಮತ್ತು 250 ಕೋಟಿ ರೂ. ಹೂಡಿಕೆ ಮಾಡಲಿವೆ. ಸರಕಾರದ ಪರವಾಗಿ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಮೂರೂ ಸಂಸ್ಥೆಗಳ ಅಧ್ಯಕ್ಷರಾಗಿರುವ ಡಾ.ಪ್ರಭಾಕರ ಕೋರೆ ಗುರುವಾರ ಒಡಂಬಡಿಕೆಗಳಿಗೆ ಅಂಕಿತ ಹಾಕಿದರು.