×
Ad

ನಾನೇ ಸಿಎಂ ಎಂದು ಹೇಳಿಕೊಂಡು ತಿರುಗುವ ಕರ್ಮ ಸಿದ್ದರಾಮಯ್ಯಗೆ ಬರಬಾರದಿತ್ತು: ಜೆಡಿಎಸ್ ಲೇವಡಿ

Update: 2025-07-03 14:34 IST

ಬೆಂಗಳೂರು : ‘ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುವ ಕರ್ಮ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು’ ಎಂದು ಜಾತ್ಯತೀತ ಜನತಾ ದಳ(ಜೆಡಿಎಸ್) ಇಂದಿಲ್ಲಿ ಲೇವಡಿ ಮಾಡಿದೆ.

ಗುರುವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ‘ನಾನೇ ಸಿಎಂ.. ನಾನೇ ಸಿಎಂ.. ಎಂದು ಮಾಧ್ಯಮಗಳ ಮುಂದೆ ಗಂಟಲು ಹರಿದು ಕೊಳ್ಳುತ್ತಿರುವುದರ ಹಿಂದೆ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿರುವುದನ್ನು ಸೂಚಿಸುತ್ತಿದೆ’ ಎಂದು ಟೀಕಿಸಿದೆ.

‘ನಾಯಕತ್ವ ಬದಲಾವಣೆ ಆಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ರಂಗನಾಥ್, ರವಿ ಗಣಿಗ ಸೇರಿದಂತೆ ಹಲವರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ಇನ್ನು ತಮ್ಮ ನಾಯಕನ ಕುರ್ಚಿಗೆ ಕುತ್ತು ಬಂದಿರುವುದು ಸ್ಪಷ್ಟವಾಗುತ್ತಲೇ ಸಿದ್ದರಾಮಯ್ಯ ಆಪ್ತರು ಕೂಗುಮಾರಿಗಳಂತೆ ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.

‘ಲಾಟರಿ ಸಿಎಂ’ ಸಿದ್ದರಾಮಯ್ಯ ಅವರೇ, ನಿಮ್ಮ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ಧ ಮತ್ತು ನಿಮ್ಮ ನಾಯಕತ್ವದ ಬಗ್ಗೆ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಬೆಂಕಿ ಎದ್ದು, ಹಾದಿ-ಬೀದಿಯಲ್ಲಿ ಹೊಗೆಯಾಡುತ್ತಿದೆ. ವಿಪಕ್ಷಗಳ ವಿರುದ್ಧ ಬೆಂಕಿಯುಗುಳಿದರೇ, ನಿಮ್ಮ ಹೊಟ್ಟೆಕಿಚ್ಚು ಮತ್ತಷ್ಟು ಉಲ್ಬಣಿಸುತ್ತದೆ ಹೊರತು ಉಪಶಮನವಾಗುವುದಿಲ್ಲ’ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

‘ಅಧಿಕಾರದ ಮದ, ದರ್ಪ, ದುರಹಂಕಾರದಲ್ಲಿ ಮೆರೆಯುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್, ಹೈಕಮಾಂಡ್ ಮೆಚ್ಚಿಸಲು ಬೆಂಗಳೂರಿನ ಘನತೆ, ಗೌರವಕ್ಕೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ವಿರೋಧದ ನಡುವೆಯೂ ಮಾಡುತ್ತಿರುವುದು ಅಕ್ಷಮ್ಯ’ ಎಂದು ಜೆಡಿಎಸ್, ರಾಮನಗರ ಜಿಲ್ಲೆ ಮತ್ತು ಬೆಂಗಳೂರು ವಿವಿ ಹೆಸರು ಬದಲಾವಣೆಗೆ ಆಕ್ಷೇಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News