×
Ad

ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ತಿರಸ್ಕೃತ

ರಾಜ್ಯ ಸರ್ಕಾರಕ್ಕೆ ಹಿನ್ನಡೆ

Update: 2025-08-20 20:39 IST

ಬೆಂಗಳೂರು: ಬುಧವಾರದಂದು ವಿಧಾನ ಪರಿಷತ್‍ನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕವು ಮೂರು ಮತಗಳಿಂದ ತಿರಸ್ಕೃತಗೊಂಡಿದ್ದು, ರಾಜ್ಯ ಸರಕಾರಕ್ಕೆ ಹಿನ್ನಡೆಯಾಗಿದೆ.

ಕಾನೂನು ಸಚಿವ ಎಚ್.ಕೆ. ಪಾಟೀಲ್ ವಿಧೇಯಕವನ್ನು ಅಂಗೀಕಾರ ಮಾಡುವಂತೆ ಪರಿಷತ್ತಿನಲ್ಲಿ ಮಂಡಿಸಿದರು. ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ತಿದ್ದುಪಡಿ ವಿಧೇಯಕ ಕುರಿತಂತೆ ಕಲಾಪದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು.

ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಸೌಹಾರ್ದ ಸಹಕಾರ ಸಂಘಗಳಲ್ಲಿ ಆರ್ಥಿಕ ಶಿಸ್ತು ಹಾಗೂ ಹೊಣೆಗಾರಿಕೆ ಮೂಲಕ ಬಲವರ್ಧನೆಗೊಳಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿ ಮಸೂದೆಯಡಿ ಸೌಹಾರ್ದ ಸಂಘಗಳಲ್ಲಿ ಬರುವ ಶೇ.25ರಷ್ಟು ಠೇವಣಿ ಹಣವನ್ನು ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್‍ಗಳಲ್ಲಿ ಇಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕೆ ರಿಜಿಸ್ಟ್ರಾರ್ ಅವರ ಪೂರ್ವಾನುಮತಿ ಕಡ್ಡಾಯವಾಗಿರಲಿದೆ ಎಂದರು.

ಹಾಗೆಯೇ ಸೌಹಾರ್ದ ಸಂಘಗಳ ನಾಮನಿರ್ದೇಶಿತ ಅಧಿಕಾರಿಗಳು, ಕಾರ್ಯನಿರ್ವಾಹಕರು ಹಾಗೂ ನಿರ್ದೇಶಕರು ಪ್ರತಿ ವರ್ಷ ಆಸ್ತಿ ಘೋಷಣೆ ಮಾಡಬೇಕು. ಕಡ್ಡಾಯ ಲೆಕ್ಕಪರಿಶೋಧಕರಿಂದ ಲೆಕ್ಕಪತ್ರ ನಿರ್ವಹಣೆ ಬಗ್ಗೆ ಆಡಿಟ್ ಮಾಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ವಿಧೇಯಕಕ್ಕೆ ಸದನದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಧೇಯಕವನ್ನು ಮತಕ್ಕೆ ಹಾಕಲು ಕೋರಿದರು. ಸಭಾಪತಿ ಬಸವರಾಜ ಹೊರಟ್ಟಿ ವಿಧೇಯಕವನ್ನು ಮತಕ್ಕೆ ಹಾಕಿದರು.

ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ಪರ 23 ಮತಗಳು, ವಿರುದ್ಧ 26 ಮತಗಳು ಬಂದವು, ಈ ಹಿನ್ನೆಲೆಯಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಧಾನಪರಿಷತ್‍ನಲ್ಲಿ ತಿರಸ್ಕೃತಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News