×
Ad

ಜೋಳ ಉತ್ಪಾದನೆ, ಶೇಖರಣೆಯ ಸಮಗ್ರ ಯೋಜನೆ ಅಗತ್ಯ : ಕೆ.ಎಚ್.ಮುನಿಯಪ್ಪ

Update: 2025-11-19 20:31 IST

ಹೊಸದಿಲ್ಲಿ : ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸಾಕಷ್ಟು ಬಿಳಿಜೋಳ ಸಿಗುತ್ತಿಲ್ಲ. ನಾವು ಜೋಳ ಖರೀದಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಉತ್ತರ ಕರ್ನಾಟಕದಲ್ಲಿ ಜನತೆ ಅಕ್ಕಿಗಿಂತ ಹೆಚ್ಚು ಜೋಳವನ್ನೆ ಬಳಸುತ್ತಾರೆ. ಆದುದರಿಂದ, ಜೋಳದ ಉತ್ಪಾದನೆ ಮತ್ತು ಶೇಖರಣೆಯ ಬಗ್ಗೆ ಸಮಗ್ರ ಯೋಜನೆ ಅಗತ್ಯವಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿಯನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿ ಮನವಿ ಪತ್ರ ಸಲ್ಲಿಸಿದ ಬಳಿಕ ಕರ್ನಾಟಕ ಭವನದಲ್ಲಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ವಿಶೇಷವಾಗಿ ‘ಮಾಲ್ದಂಡಿ' ಜೋಳದ ಬೆಲೆಯ ಸಮಸ್ಯೆಯನ್ನು ಉಲ್ಲೇಖಿಸಿದ ಅವರು, ಈ ಜೋಳದ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕ್ವಿಂಟಾಲ್‍ಗೆ 1000 ರಿಂದ 1500 ರೂಪಾಯಿ ಕಡಿಮೆಯಿದೆ. ಇದರ ಬೆಲೆಯನ್ನು ಹೆಚ್ಚಿಸಿದರೆ ರೈತರು ಸರಕಾರಕ್ಕೆ ಸರಬರಾಜು ಮಾಡಲು ಮುಂದೆ ಬರುತ್ತಾರೆ ಎಂದು ಹೇಳಿದರು.

ಈ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಮಂತ್ರಿಗಳಿಗೆ ಮನವಿ ಮಾಡಲಾಗಿದೆ. ರಾಜ್ಯದ ಬೆಲೆ ನಿಗಧೀಕರಣ ಸಮಿತಿಯು ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಮುನಿಯಪ್ಪ ತಿಳಿಸಿದರು.

‘ಇಂದಿರಾ ಕಿಟ್' ಯೋಜನೆ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ‘ಇಂದಿರಾ ಕಿಟ್’ ಪರಿಚಯಿಸಲಾಗುವುದು. ಈ ಕಿಟ್ಟಿನಲ್ಲಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಸೇರಿರುತ್ತದೆ. ಈ ಪದಾರ್ಥಗಳನ್ನು ನೀಡುವುದರಿಂದ ನೇರವಾಗಿ ಆ ಕುಟುಂಬಕ್ಕೆ ಸೇರುತ್ತದೆ. ಇದು ಪ್ರೊಟೀನ್ ಸಮೃದ್ಧ ಆಹಾರವಾಗಿದ್ದು, ಮಕ್ಕಳು ಮತ್ತು ಕುಟುಂಬದ ಎಲ್ಲ ಸದಸ್ಯರ ಬೆಳವಣಿಗೆಗೆ ಉಪಯುಕ್ತವಾಗಿದೆ ಎಂದು ಅವರು ತಿಳಿಸಿದರು.

ಈ ಯೋಜನೆಯನ್ನು ಮುಂದಿನ ಸಾಲಿನ ಜನವರಿ ಅಥವಾ ಫೆಬ್ರವರಿ ವೇಳೆಗೆ ಕಾರ್ಯರೂಪಕ್ಕೆ ತರಲು ಟೆಂಡರ್ ಪ್ರಕ್ರಿಯೆ ಹಾಗೂ ಗುಣಮಟ್ಟದ ಪರಿಶೀಲನೆ ನಡೆಯುತ್ತಿದೆ ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News