×
Ad

ಸರಕಾರಿ ನೌಕರರಿಗಿರುವ ಸೌಲಭ್ಯಗಳ ಕಲ್ಪಿಸಲು ಕೆಎಂಎಫ್ ನೌಕರರ ಒತ್ತಾಯ : ಬೇಡಿಕೆ ಈಡೇರಿಕೆಗೆ ಫೆ.7ರ ಗಡುವು

Update: 2025-01-31 18:36 IST

ಬೆಂಗಳೂರು : ಕೆಎಂಎಫ್‍ನಲ್ಲಿ ನೌಕರರ ವೇತನ, ಸಂಬಳ, ಭತ್ಯೆ, ಸಾರಿಗೆಯ ವ್ಯವಸ್ಥೆಯಲ್ಲಿ ತಾರತಮ್ಯ ನಡೆಯುತ್ತಿದ್ದು, ಸರಕಾರಿ ನೌಕರರಿಗೆ ಇರುವಂತಹ ಸೌಲಭ್ಯಗಳ ಸಮಾನ ವ್ಯವಸ್ಥೆ ಕಲ್ಪಿಸಬೇಕೆಂದು ಕೆಎಂಎಫ್ ಅಧಿಕಾರಿಗಳ ಸಂಘ ಒತ್ತಾಯಿಸಿದೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ, ಸರಕಾರಿ ನೌಕರರಂತೆ ಕೆಎಂಎಫ್ ನೌಕರರಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಿಕೊಡಬೇಕು. ಫೆ.3ರ ವರೆಗೆ ಕೆಎಂಎಫ್ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಗಡುವು ನೀಡಿದ್ದು, ರಾಜ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಫೆ.7ರ ವರೆಗೆ ನೌಕರರು ಯಾವುದೇ ಪ್ರತಿಭಟನೆ ನಡೆಸುವುದಿಲ್ಲ. ಅಷ್ಟರೊಳಗೆ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೆಎಂಎಫ್‍ನಲ್ಲಿ ಸರಕಾರಿ ನೌಕರರು ಎರವಲು ಸೇವೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರಕಾರಿ ನೌಕರರು ಏಳನೇ ವೇತನ ಆಯೋಗದ ಸೌಲಭ್ಯವನ್ನು ಪಡೆಯಲಿದ್ದಾರೆ. ಅದೇ ರೀತಿ ಪೂರ್ವನ್ವಯವಾಗುವಂತೆ ಕೆಎಂಎಫ್ ನೌಕರರಿಗೆ ಏಳನೇ ವೇತನ ಆಯೋಗದ ಸವಲತ್ತುಗಳನ್ನು ಒದಗಿಸಬೇಕು. ಫೆಬ್ರವರಿ ಮೊದಲ ವಾರದೊಳಗೆ ಕೆಎಂಎಫ್ ನೌಕರರ ಬೇಡಿಕೆಗಳನ್ನು ಸರಕಾರ ಪರಿಷ್ಕರಿಸಿ ಜಾರಿ ತರಬೇಕು ಎಂದು ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದರು.

ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿಗೆ ಯಥಾವತ್ತಾಗಿ ಪೂರ್ಣ ಜಾರಿಗೆ ತರಬೇಕು. ಸರಕಾರದ ಮಂಡಳಿ ನಿಗಮಗಳಲ್ಲಿ ಇದ್ದಂತೆ ವಾರ್ಷಿಕ ಲಾಭ ಮತ್ತು ನಷ್ಟ ಮಾತ್ರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಪರಿಗಣಿಸಬೇಕು ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು.

ಕರ್ನಾಟಕ ಹಾಲು ಮಹಾಮಂಡಳಿ ಸಭೆಗಳಲ್ಲಿ ಸರಕಾರದ ಪ್ರತಿನಿಧಿಗಳಾದ ಆರ್‍ಸಿಎಸ್, ಪಶುಸಂಗೋಪನೆ, ಎನ್‍ಡಿಡಿಬಿ ಪ್ರತಿನಿಧಿಗಳು ಇರುವುದರಿಂದ ಕಾಲಕಾಲಕ್ಕೆ ಸರಕಾರ ಬಿಡುಗಡೆ ಮಾಡುವ ವೇತನ ಮತ್ತು ಭತ್ಯೆಗಳ ಅನುಮೋದನೆಯ ಅಧಿಕಾರವನ್ನು ಕೆಎಂಎಫ್ ಆಡಳಿತ ಮಂಡಳಿಗೆ ನೀಡಬೇಕು ಎಂದು ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದರು.

ಕರ್ನಾಟಕ ಹಾಲು ಮಂಡಳಿ ಒಕ್ಕೂಟದ ಉನ್ನತ ಹುದ್ದೆಗಳಾದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗಳಿಗೆ ಕರ್ನಾಟಕ ಹಾಲು ಮಂಡಳಿಯಲ್ಲಿ ಕೆಲಸ ನಿರ್ವಹಿಸಿದ ತಾಂತ್ರಿಕ ಹಿನ್ನೆಲೆಯುಳ್ಳ ಅಥವಾ ಡೇರಿ ಉದ್ದಿಮೆಯಲ್ಲಿ ಅನುಭವವುಳ್ಳ ನಿರ್ದೇಶಕ ಹುದ್ದೆಗಳಿಗೆ ಮೀಸಲಿಡಬೇಕು ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಎಂಎಫ್ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ಪ್ರಧಾನ ಕಾರ್ಯದರ್ಶಿ ಪ್ರಭುಶಂಕರ, ಜಂಟಿ ಕಾರ್ಯದರ್ಶಿ ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News