×
Ad

ಆಧಾರ್ ಜೋಡಣೆ | ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರಿಗೆ ಸಂಭಾವನೆ : ಕೃಷ್ಣ ಬೈರೇಗೌಡ

Update: 2025-02-16 18:27 IST

ಕೃಷ್ಣ ಬೈರೇಗೌಡ

ಬೆಂಗಳೂರು : ಪಹಣಿಗಳಿಗೆ ಆಧಾರ್ ಜೋಡಣೆ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರಿಗೆ ಪ್ರತಿ ಒಂದು ಆಧಾರ್ ಜೋಡಣೆಗೆ, ತಲಾ ಒಂದು ರೂಪಾಯಿಯಂತೆ ಸಂಭಾವನೆ ನೀಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಹಣಿಗಳ ಜೊತೆ ಆಧಾರ್ ಜೋಡಣೆ (ಆಧಾರ್ ಸೀಡಿಂಗ್) ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಯೋಜನೆ. ಅಕ್ರಮ ನೋಂದಣಿಗಳ ತಡೆ, ರೈತರಿಗೆ ಸೂಕ್ತ ಸಮಯದಲ್ಲಿ ಅಗತ್ಯ ನೆರವು ನೀಡಲು, ಸರ್ಕಾರಿ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಹಾಗೂ ಫೌತಿ ಖಾತೆ ನೀಡಲು ಆಧಾರ್ ಸೀಡಿಂಗ್ ಪಾತ್ರ ಮಹತ್ವವಾದದ್ದು ಎಂದು ತಿಳಿಸಿದ್ದಾರೆ.

ಇದೇ ಕಾರಣಕ್ಕೆ ಕಂದಾಯ ಇಲಾಖೆಯ ಜವಾಬ್ದಾರಿ ನನ್ನ ಹೆಗಲಿಗೆ ಬಿದ್ದ ತಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಆಧಾರ್ ಸೀಡಿಂಗ್ ಗುರಿ ನೀಡಲಾಗಿತ್ತು. ಆದರೆ, ಫೀಲ್ಡಿಗಿಳಿದು ಈ ಕೆಲಸವನ್ನು ಸಾಧ್ಯವಾಗಿಸಿದ್ದು ಮಾತ್ರ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರ ಶ್ರಮ ಮತ್ತು ಪ್ರಾಮಾಣಿಕ ಕೆಲಸದ ಪರಿಣಾಮ ಪ್ರಸಕ್ತ ಸಾಲಿನ ಜ.31ರವರೆಗೆ ಒಟ್ಟು 2,22,83,817 ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಕೆಲಸವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕೆಲಸವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಹಲವು ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ಇಂತಹ ಪ್ರಾಮಾಣಿಕ ಅಧಿಕಾರಿಗಳ ಬಗ್ಗೆ ಕಾಳಜಿ ವಹಿಸಬೇಕಾದದ್ದು ಮತ್ತು ಅವರ ಕೆಲಸವನ್ನು ಗುರುತಿಸಿ ಪ್ರಶಂಶಿಸಬೇಕಾದ ಬಾದ್ಯತೆ-ಜವಾಬ್ದಾರಿ ಸರಕಾರದ ಮೇಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜ.28ರಂದು ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದ ರಾಜ್ಯ ಮಟ್ಟದ ಪರಿಶೀಲನಾ ಹಾಗೂ ನಿರ್ವಹಣಾ ಸಮಿತಿಯ ಸಭೆ ನಡೆಸಿ, ಪಹಣಿಗಳಿಗೆ ಆಧಾರ್ ಜೋಡಣೆ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರಿಗೆ ಪ್ರತಿ ಒಂದು ಆಧಾರ್ ಜೋಡಣೆಗೆ, ತಲಾ ಒಂದು ರೂಪಾಯಿಯಂತೆ ಸಂಭಾವನೆ ನೀಡಬೇಕು ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.

‘ಭೂ ಸುರಕ್ಷಾ’ ಯೋಜನೆಯ ಅಡಿಯಲ್ಲಿ ಈಗಾಗಲೇ ಪಿಎಫ್‍ಎಂಎಸ್ ಮೂಲಕ ಬಿಡುಗಡೆಗೊಳಿಸಲಾದ ಅನುದಾನದಲ್ಲಿ ಜಿಲ್ಲಾಧಿಕಾರಿಗಳ ಖಾತೆಯಿಂದ 4,45,67,634 ರೂಪಾಯಿಗಳನ್ನು ಆಧಾರ್ ಜೋಡಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರಿಗೆ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಈ ಸಂಭಾವನೆಯ ಪಾವತಿ ಕುರಿತು ಕೆಲ ಮಾರ್ಗಸೂಚಿಗಳನ್ನು ಅಳವಡಿಸಿದ್ದು, ಅದರಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸಂಭಾವನೆ ಕುರಿತ ಮಾರ್ಗಸೂಚಿ: ಜ.31ರವರೆಗೆ ಆಧಾರ್ ಜೋಡಣೆ ಕಾರ್ಯ ನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಅವರ ಗ್ರಾಮ ಸಹಾಯಕರಿಗೆ ಪ್ರತಿ ಒಂದು ಆಧಾರ್ ಜೋಡಣೆಗೆ ತಲಾ ಒಂದು ರೂಪಾಯಿಯಂತೆ ಸಂಭಾವನೆ ಪಾವತಿ ಮಾಡುವುದು. ಉದಾ: 1000 ಆಧಾರ್ ಜೋಡಣೆಗೆ 2000 ರೂ.ನೀಡಲಾಗುತ್ತದೆ. ಈ ಪೈಕಿ ಆ ವೃತ್ತದ ಒಬ್ಬ ಗ್ರಾಮ ಆಡಳಿತ ಅಧಿಕಾರಿಗೆ 1000 ಮತ್ತು ಆ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬ ಗ್ರಾಮ ಸಹಾಯಕರಿಗೆ 1000 ರೂ.ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಆಧಾರ್ ಜೋಡಣೆ ಕಾರ್ಯವನ್ನು ನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿ ಹಾಗೂ ಗ್ರಾಮ ಸಹಾಯಕರ ವಿವರವನ್ನು ತಹಶೀಲ್ದಾರರಿಂದ ಪಡೆದು, ಆ ಮಾಹಿತಿಯನ್ನು ಕಟ್ಟು ನಿಟ್ಟಾಗಿ ಪರಿಶೀಲಿಸಿ, ಕಾರ್ಯನಿರ್ವಹಿಸಿದ ಅವಧಿಗೆ ತಕ್ಕಂತೆ ಮಾತ್ರ ಸಂಭಾವನೆಯನ್ನು ಪಾವತಿ ಮಾಡಲು ಕ್ರಮವಹಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಅನುದಾನವನ್ನು ಪಿಎಫ್‍ಎಂಎಸ್ ತಂತ್ರಾಂಶದ ಮೂಲಕ ‘ಆಧಾರ್ ಲಿಂಕೇಜ್ ವಿತ್ ಆರ್‌ಒಆರ್ ಕಾಂಪೋನೆಂಟ್’ ಅಡಿಯಲ್ಲಿ ಕೂಡಲೇ ಬಿಡುಗಡೆ ಮಾಡಲು ಮತ್ತು ಆ ಅನುದಾನದ ಬಿಡುಗಡೆ ಹಾಗೂ ಪಾವತಿಯ ವಿಷಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಅವರು ಸೂಚಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿ ಹಾಗೂ ಗ್ರಾಮ ಸಹಾಯಕರ ಬ್ಯಾಂಕ್ ಖಾತೆಯ ವಿವರಗಳನ್ನು ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದು, ಪತ್ರದೊಂದಿಗೆ ಲಗತ್ತಿಸಲಾದ ಬಳಕೆದಾರರ ಕೈಪಿಡಿಯನ್ವಯ ಅನುದಾನ ಬಿಡುಗಡೆ ಮತ್ತು ಪಾವತಿ ವಿಷಯದ ಕುರಿತು ಫೆ.21ರೊಳಗಾಗಿ ತಪ್ಪದೇ ಕ್ರಮವಹಿಸಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News