ಕೆಎಸ್‍ಡಿಎಲ್ ಮೇ ತಿಂಗಳಲ್ಲಿ 186 ಕೋಟಿ ರೂ.ವಹಿವಾಟಿನ ದಾಖಲೆ : ಎಂ.ಬಿ.ಪಾಟೀಲ್
ಎಂ.ಬಿ.ಪಾಟೀಲ್
ಬೆಂಗಳೂರು : ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್‍ಡಿಎಲ್) ಮೇ ತಿಂಗಳಲ್ಲಿ 186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ. ಉದ್ಯಮದ 108 ವರ್ಷಗಳ ಇತಿಹಾಸದಲ್ಲೇ ಕೇವಲ ಒಂದು ತಿಂಗಳಲ್ಲಿ ಹೀಗೆ ಭಾರಿ ವಹಿವಾಟು ನಡೆಸಿರುವುದು ಇದೇ ಪ್ರಪ್ರಥಮ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸ್ಥೆಗೆ ಮೇ ತಿಂಗಳಲ್ಲಿ 151.50 ಕೋಟಿ ರೂ.ವಹಿವಾಟಿನ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಈಗ ಇದಕ್ಕಿಂತ 35 ಕೋಟಿ ರೂ. ಹೆಚ್ಚಿನ ವಹಿವಾಟು ನಡೆಸುವ ಮೂಲಕ ಶೇ.125ರಷ್ಟು ಸಾಧನೆ ಮತ್ತು ಶೇ.15ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಈ ವಹಿವಾಟಿನ ಪೈಕಿ ರಫ್ತಿನ ಮೂಲಕ 1.81 ಕೋಟಿ ರೂ. ಗಳಿಸಲಾಗಿದೆ. ರಫ್ತು ವಹಿವಾಟನ್ನು ವಾರ್ಷಿಕವಾಗಿ 150 ಕೋಟಿ ರೂ.ಗೆ ಕೊಂಡೊಯ್ಯುವ ಗುರಿ ಇದೆ ಎಂದು ತಿಳಿಸಿದ್ದಾರೆ.
ಸಂಸ್ಥೆಯು ತಯಾರಿಸುವ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಎಲ್ಲ 45 ಬಗೆಯ ಉತ್ಪನ್ನಗಳು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬಯಿ, ಕೋಲ್ಕತ್ತ, ಹೊಸದಿಲ್ಲಿ ಶಾಖೆಗಳಲ್ಲಿ ಮತ್ತು ಬೆಂಗಳೂರಿನ ನೇರ ಮಾರುಕಟ್ಟೆ ವಿಭಾಗದ ಮೂಲಕ ನಿರೀಕ್ಷೆಗೂ ಮೀರಿ ಮಾರಾಟವಾಗಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೆಎಸ್‍ಡಿಎಲ್ ಉತ್ಪನ್ನಗಳಾದ ಸಾಬೂನು, ಶವರ್ ಜೆಲ್, ಅಗರಬತ್ತಿ ಮುಂತಾದವುಗಳಿಗೆ ವ್ಯಾಪಕ ಬೇಡಿಕೆ ಬರುತ್ತಿದೆ. ಸಂಸ್ಥೆಯಲ್ಲಿ ಗುಣಮಟ್ಟದ ಉತ್ಪಾದನೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡಿರುವ ಪ್ರಯತ್ನಗಳು ಫಲ ಕೊಡುತ್ತಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೇ ಅತಿ ಹೆಚ್ಚು ಅಂದರೆ 85 ಕೋಟಿ ರೂ. ವಹಿವಾಟು ನಡೆದಿದೆ. ಉಳಿದ 100 ಕೋಟಿ ರೂ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಆಗಿದೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.
ಈ ಹಿಂದೆ 2024ರ ಸೆಪ್ಟೆಂಬರ್ ತಿಂಗಳೊಂದರಲ್ಲೇ 178 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಇದನ್ನು ದಾಟಲಾಗಿದೆ. ಸಾಮಾನ್ಯವಾಗಿ ಕೆಎಸ್‍ಡಿಎಲ್ ಪ್ರತಿ ತಿಂಗಳೂ ಸರಾಸರಿ 135 ಕೋಟಿ ರೂ.ಗಳಿಂದ 140 ಕೋಟಿ ರೂ.ವರೆಗೂ ವಹಿವಾಟು ನಡೆಸುತ್ತದೆ. ಆದರೆ, ಮೇ ತಿಂಗಳಲ್ಲಿ ಇದಕ್ಕಿಂತ 41 ಕೋಟಿ ರೂ.ಹೆಚ್ಚು ವಹಿವಾಟು ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆಯ ಕಾರ್ಯವಿಧಾನವನ್ನು ಹೆಚ್ಚು ದಕ್ಷಗೊಳಿಸಲಾಗಿದೆಯೇ ವಿನಃ ಯಾವ ಹೊಸ ಉಪಕರಣಗಳನ್ನೂ ಖರೀದಿಸಿಲ್ಲ. ಸದ್ಯದಲ್ಲೇ ಸಂಸ್ಥೆಯ ವತಿಯಿಂದ ಸುಗಂಧ ದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.
ಸಿ.ಎಸ್.ನಾಡಗೌಡ, ಅಧ್ಯಕ್ಷ, ಕೆಎಸ್‍ಡಿಎಲ್